×
Ad

ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಲಾಕ್‌ಡೌನ್ ಘೋಷಣೆ ಮಾಡಲಿ: ಮಲ್ಲಿಕಾರ್ಜುನ ಖರ್ಗೆ

Update: 2022-01-05 20:47 IST

ಕಲಬುರಗಿ, ಜ. 5: ‘ಜನಸಾಮಾನ್ಯರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಲಾಕ್‌ಡೌನ್, ವಾರಾಂತ್ಯದ ಕರ್ಫ್ಯೂ ಸೇರಿದಂತೆ ಏನು ಬೇಕಾದರೂ ಮಾಡಿಕೊಳ್ಳಲಿ' ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರಗಳ ಎಡಬಿಡಂಗಿ ನಿರ್ಧಾರಗಳಿಂದ ಬಡ, ಮಧ್ಯಮ ವರ್ಗದ ಜನರು ಎಲ್ಲವನ್ನ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ನಂತರ ಲಾಕ್‌ಡೌನ್ ಆದರೂ ಮಾಡಲಿ, ಏನು ಬೇಕಾದರೂ ಮಾಡಿಕೊಳ್ಳಲಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕು ತಡೆಗಟ್ಟುವ ವಿಚಾರದಲ್ಲಿ ಏನೇ ಮಾತನಾಡಿದರೂ ತಪ್ಪಾಗುತ್ತದೆ. ಸೂಕ್ತ ಮುನ್ನಚ್ಚರಿಕೆ ಕೈಗೊಳ್ಳದೆ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಜನತೆ ಏನೆಲ್ಲ ಸಂಕಷ್ಟ ಅನುಭವಿಸಿದ್ದಾರೆಂದು ಕಂಡಿದ್ದೇವೆ. ಇದೀಗ ಆರ್ಥಿಕತೆ ಚೇತರಿಸಿಕೊಳ್ಳುವ ಸಂದರ್ಭದಲ್ಲಿ ಲಾಕ್‌ಡೌನ್ ಹೇರಿದರೆ ಜನತೆ ಮತ್ತಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆಂದು ಅವರು ತಿಳಿಸಿದರು.

ಮುನ್ನಚ್ಚರಿಕೆ ಇಲ್ಲದೆ ಲಾಕ್‌ಡೌನ್ ಮಾಡುವುದು ಸರಿಯಲ್ಲ. ಎಲ್ಲದರ ಬಗ್ಗೆ ಚಿಂತನ-ಮಂಥನ ಮಾಡಿ ಲಾಕ್‌ಡೌನ್ ಜಾರಿ ಮಾಡಬೇಕು. ಯಾವ ಯಾವ ವಲಯಗಳಿಗೆ ರಿಯಾಯಿತಿ ಕೊಡಬೇಕು ಎನ್ನುವುದನ್ನು ನಿರ್ಧರಿಸಬೇಕು. ಕೋವಿಡ್‌ನಿಂದ ಮೃತಪಟ್ಟವರಿಗೆ ಇನ್ನೂ ಸರಕಾರ ಪರಿಹಾರವನ್ನೇ ನೀಡಿಲ್ಲ. ಉತ್ತರ ಪ್ರದೇಶದಲ್ಲಿ ಮೃತಪಟ್ಟವರನ್ನು ಸುಡಲು ಕಟ್ಟಿಗೆ ಸಿಕ್ಕಿಲ್ಲ. ಅಂತಹ ಸ್ಥಿತಿ ಮರುಕಳಿಸಬಾರದು ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News