ಶಿವಮೊಗ್ಗ: ಅಸ್ಸಾಂ ಮೂಲದ ವ್ಯಕ್ತಿಯ ಕೊಲೆ ಪ್ರಕರಣ; ಆರೋಪಿಗೆ ಜೀವಾವಧಿ ಶಿಕ್ಷೆ

Update: 2022-01-05 16:52 GMT
ಮನ್ಸೂರ್ ಅಲಿಖಾನ್

ಶಿವಮೊಗ್ಗ: ಅತ್ಯಾಚಾರ ತಡೆಯಲು ಬಂದ ಮಹಿಳೆಯ ಪತಿಯನ್ನೇ ಕೊಲೆ ಮಾಡಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠಾಸೀನ ಭದ್ರಾವತಿ ನ್ಯಾಯಾಲಯ ನ್ಯಾಯಾಧೀಶ ಆರ್.ವೈ. ಶಶಿಧರ್ ಬುಧವಾರ ಆದೇಶಿಸಿದ್ದಾರೆ.

ಗೌಡ್ರಳ್ಳಿ ಗ್ರಾಮದ ಮನ್ಸೂರ್ ಅಲಿಖಾನ್(31) ಎಂಬಾತನೇ ಶಿಕ್ಷೆಗೆ ಗುರಿಯಾದ ಆರೋಪಿ. ಈತ 2019ರ ಜುಲೈ 22ರ ರಾತ್ರಿ ಅಸ್ಸಾಂ ಮೂಲದ ನಬೀಕುಲ್ ಇಸ್ಲಾಂ (21) ಎಂಬಾತನ ಕೊಲೆ ಮಾಡಿದ್ದ.

ನಬೀಕುಲ್ಲಾ ವಾಸವಿದ್ದ ಮನೆಯ ಹೆಂಚನ್ನು ತೆಗೆದು ಮನೆಗೆ ನುಗ್ಗಿ ಆತನ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಪತಿಯು ತಡೆಯಲು ಮುಂದಾಗಿದ್ದಾನೆ. ಆಗ ಮರದ ರೀಪರ್ ನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಭದ್ರಾವತಿ ಗ್ರಾಮಾಂತರ ಠಾಣೆ ಸಿಪಿಐ ಯೋಗೇಶ್ ತನಿಖೆ ಕೈಗೊಂಡು ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಂತರ ಆರೋಪಗಳು ದೃಢಪಟ್ಟ ಕಾರಣದಿಂದ ಶಿಕ್ಷೆ ವಿಧಿಸಲಾಗಿದೆ.

ಆರೋಪಿಗೆ ಜೀವಾವಧಿ ಶಿಕ್ಷೆ, 20,000 ರೂ ದಂಡ ವಿಧಿಸಲಾಗಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಪಿ.ರತ್ನಮ್ಮ ವಾದ ಮಂಡಿಸಿದ್ದರು.
ಫೋಟೊ: 05ಎಸ್‍ಎಂಜಿ ಅಲಿಖಾನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News