ಮೇಲ್ಮನೆ ಮೌಲ್ಯ ಕುಸಿಯದಂತೆ ತಡೆಯಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-01-05 16:57 GMT

ಬೆಂಗಳೂರು, ಜ. 5: ‘ಇತ್ತೀಚಿನ ದಿನಗಳಲ್ಲಿ ವಿಧಾನ ಪರಿಷತ್(ಮೇಲ್ಮನೆ) ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಅಲ್ಲದೆ, ಮೇಲ್ಮನೆಯ ಮೌಲ್ಯ ಕುಸಿಯದಂತೆ ತಡೆಯಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.

ಬುಧವಾರ ವಿಕಾಸಸೌಧದ ನಾಲ್ಕನೆ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ-419ರಲ್ಲಿ ಏರ್ಪಡಿಸಿದ್ದ ಪರಿಷತ್ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೇಲ್ಮನೆ ತನ್ನದೆ ಇತಿಹಾಸ, ಪರಂಪರೆಯನ್ನು ಹೊಂದಿದೆ. ಪರಿಷತ್‌ನ ಮೌಲ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ಅಗತ್ಯ. ಇದಕ್ಕೆ ಪೂರಕ ಯೋಜನೆ ರೂಪಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು. 

ನಾನೂ ವಿಧಾನ ಪರಿಷತ್ ಸದಸ್ಯನಾಗಿಯೇ ನನ್ನ ರಾಜಕೀಯ ಜೀವನ ಆರಂಭಿಸಿದ್ದು, ರಾಜಕಾರಣದಲ್ಲಿ ಇರುವವರಿಗೆ ಎಂದೂ ನಿವೃತ್ತಿಯ ಪ್ರಶ್ನೆ ಇರುವುದಿಲ್ಲ. ಅರ್ಹತೆ ಮತ್ತು ನಿವೃತ್ತಿ ಇಲ್ಲದ ಕ್ಷೇತ್ರ ಎಂದರೆ ಅದು ರಾಜಕಾರಣ. ಹೀಗಾಗಿ ಸಮಾಜವೇ ರೂಪಿಸಿರುವಂತಹ ಅರ್ಹತೆಗಳು ಮಾತ್ರ ಈ ಕ್ಷೇತ್ರದಲ್ಲಿವೆ. ಅವುಗಳನ್ನು ಪಾಲಿಸಬೇಕಾದುದು ಕಡ್ಡಾಯ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಭ ಹಾರೈಕೆ: ಸದನದ ಕಲಾಪ ನಡೆಯುವ ಸಮಯದಲ್ಲಿ ಸರಕಾರಕ್ಕೆ ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿ ಸದನದ ಘನತೆ ಕಾಪಾಡಬೇಕು. ಸ್ವ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷರು ಆಳವಡಿಸಿಕೊಂಡಿದ್ದಂತಹ ಉಭಯ ಸದನಗಳ ವ್ಯವಸ್ಥೆಯನ್ನು ಸ್ವಾತಂತ್ರ‍್ಯ ಪಡೆದ ನಂತರ ಪ್ರಜಾಪ್ರಭುತ್ವದಲ್ಲಿ ಮಹತ್ತರ ಬದಲಾವಣೆಗಳನ್ನು ತರುವ ಸಲುವಾಗಿ ಸಂವಿಧಾನದಲ್ಲಿ ನಾವು ಅಳವಡಿಸಿಕೊಂಡು ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದೇವೆ ಎಂದರು.

ಸದನದಲ್ಲಿ ಶಿಕ್ಷಣ ಕೇತ್ರ, ಗ್ರಾಮೀಣಾಭಿವೃದ್ಧಿ ಕ್ಷೇತ್ರ, ನಗರಾಭಿವೃದ್ಧಿ, ಕಂದಾಯ, ಇಂದನ ಯಾವುದೇ ಕ್ಷೇತ್ರದಲ್ಲಿ ಇರುವಂತಹ ಜ್ವಲಂತ ಸಮಸ್ಯೆಗಳ ಬಗೆಗೆ ವಿವಿಧ ಪರಿಣಿತರು ಸದನದಲ್ಲಿ ಸವಿಸ್ತಾರವಾಗಿ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ. ಅದೇ ರೀತಿ ಸದನದ ಗೌರವವನ್ನು ಎತ್ತಿ ಹಿಡಿದಿದ್ದಾರೆ ಎಂದು ಅವರು ತಿಳಿಸಿದರು. 

ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ಜೀವನದಲ್ಲಿ ಸಿಹಿ-ಕಹಿ ಘಟನೆಗಳು ಬರುತ್ತಲೇ ಇರುತ್ತವೆ. ಯಾವಾಗಲೂ ಕಹಿ ಘಟನೆಗಳನ್ನು ನೆನಪಿಸಿಕೊಳ್ಳದೆ ಸಿಹಿ ಘಟನೆಗಳನ್ನೆ ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ನಮ್ಮ ಅವಧಿಯಲ್ಲಿ ಗಂಗೂಬಾಯಿ ಹಾನಗಲ್, ಎಂ.ಸಿ.ಮೋದಿ ಅವರು ಇದ್ದರು ಅಂತಹವರ ಜೊತೆಯಲ್ಲಿ ಕಾರ್ಯನಿರ್ವಹಿಸಿದ್ದು ನನಗೆ ಹೆಮ್ಮೆ ಅನಿಸುತ್ತದೆ ಎಂದು ನೆನಪು ಮಾಡಿಕೊಂಡರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಸಾಮಾಜಿಕ ವ್ಯವಸ್ಥೆಯನ್ನು ವಿಮರ್ಶೆ ಮಾಡುವ ವಿಷಯದಲ್ಲಿ ಮೇಲ್ಮನೆ (ಪರಿಷತ್) ಎತ್ತರದ ಸ್ಥಾನದಲ್ಲಿದೆ. ಪರಿಷತ್ ಕೆಟ್ಟು ಹೋಗುತ್ತಿದೆ ಎಂಬ ಭಾವನೆ ಕೆಲವು ಸಂದರ್ಭಗಳಲ್ಲಿ ಮೂಡಿದರೂ, ಅದು ಶಕ್ತಿ ಕಳೆದುಕೊಂಡಿಲ್ಲ' ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯ ಸೇರಿದಂತೆ ಹಲವು ಗಣ್ಯರು ವಿಧಾನ ಪರಿಷತ್ ಪ್ರತಿನಿಧಿಸಿದ್ದಾರೆ. ಅವರು ಬಿಟ್ಟು ಹೋಗಿರುವ ಮೌಲ್ಯಗಳಿವೆ. ಹಿರಿಯರು ಹಾಕಿಕೊಟ್ಟ ಉತ್ತಮವಾದ ಮಾದರಿಗಳನ್ನು ಅನುಸರಿಸಿಕೊಂಡು ಮುಂದಕ್ಕೆ ಸಾಗಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ನುಡಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪರಿಷತ್ ಮಾಜಿ ಸಭಾಪತಿಗಳಾದ ಡಾ.ಬಿ.ಎಲ್.ಶಂಕರ್ ಡಿ.ಎಚ್.ಶಂಕರಮೂರ್ತಿ ಸೇರಿದಂತೆ ವಿಧಾನ ಪರಿಷತ್ತಿನ ನಿವೃತ್ತರಾದ ಸದಸ್ಯರು ಸೇರಿದಂತೆ ಇನ್ನಿತರರು ಹಾಜರಿದ್ದರು.

‘ರಾಜಕಾರಣದಲ್ಲಿ ಇರುವವರಿಗೆ ಅಧಿಕಾರ, ಹುದ್ದೆಗಿಂತಲೂ ಮುಖ್ಯವಾಗಿ ಜನಸಾಮಾನ್ಯರ ಹೃದಯದಲ್ಲಿ ಸ್ಥಾನ ಪಡೆದಿರಬೇಕು. ಪ್ರಸ್ತುತತೆ ಕಳೆದುಕೊಂಡರೆ ರಾಜಕಾರಣದಲ್ಲಿ ಉಳಿಯುವುದು ಸಾಧ್ಯವಿಲ್ಲ. ಹೀಗಾಗಿ ರಾಜಕೀಯದಲ್ಲಿ ಸದಾ ಕ್ರಿಯಾಶೀಲವಾಗಿ ಇರುವವರು ಉಳಿಯಲು ಸಾಧ್ಯ'
-ಬಸವರಾಜ, ಬೊಮ್ಮಾಯಿ ಮುಖ್ಯಮಂತ್ರಿ

‘ಸದನಗಳು ಒಂದು ಕುಟುಂಬವಿದ್ದಂತೆ, ಉತ್ತಮ ರೀತಿಯಲ್ಲಿ ನಾವು ಕೆಲಸ ನಿರ್ವಹಿಸಬೇಕು. ಎಲ್ಲ ಸದಸ್ಯರೂ ಮುಂದೆಯೂ ಈ ಸದನದ ಬಗ್ಗೆ ಗೌರವವನ್ನು ಕಾಪಾಡಿಕೊಳ್ಳಬೇಕು. ಸದನದಲ್ಲಿ ಚರ್ಚೆಯಾಗುವ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕೇ ವಿನಃ ಬಾವಿಗಿಳಿದು ಧರಣಿ ಮಾಡಿ ಸದನದ ಗೌರವಕ್ಕೆ ಧಕ್ಕೆ ತರಬಾರದು'
-ಬಸವರಾಜ ಹೊರಟ್ಟಿ, ಸಭಾಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News