ಸರಕಾರಿ ಜಾಗದಲ್ಲಿ ಅಕ್ರಮವಾಗಿ ಶಿಲುಬೆ ನಿರ್ಮಾಣ ಆರೋಪ; ತೆರವಿಗೆ ಆಗ್ರಹಿಸಿ ಬಜರಂಗದಳ ಧರಣಿ

Update: 2022-01-05 17:53 GMT

ಚಿಕ್ಕಮಗಳೂರು, ಜ.5: ಸರಕಾರಿ ಜಾಗದಲ್ಲಿ ಕ್ರೈಸ್ತ ಸಮುದಾಯದವರು ಅಕ್ರಮವಾಗಿ ಶಿಲುಬೆಯನ್ನು ನಿರ್ಮಿಸಿದ್ದಾರೆಂದು ಆರೋಪಿಸಿ ಎನ್.ಆರ್.ಪುರ ತಾಲೂಕಿನ ಬಜರಂಗದಳದ ಘಟಕ ಬುಧವಾರ ಕರಗುಂದ ಚಲೋ ಚಳವಳಿಗೆ ಕರೆ ನೀಡಿ ಅನುಮತಿ ಇಲ್ಲದೇ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದ ಘಟನೆ ನಡೆಯಿತು.

ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕರಗುಂದ ಗ್ರಾಮದಲ್ಲಿ ಸರಕಾರಿ ಜಾಗದಲ್ಲಿ ಕ್ರೈಸ್ತ ಸಮುದಾಯದವರು ಶಿಲುಬೆಯೊಂದನ್ನು ನಿರ್ಮಿಸಿದ್ದು, ಇದನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ತಾಲೂಕು ಬಜರಂಗದಳ ಬುಧವಾರ ಕರಗುಂದ ಚಲೋ ಚಳವಳಿಗೆ ಕರೆ ನೀಡಿತ್ತು. ಬುಧವಾರ ಬೆಳಗ್ಗೆ ಬಜರಂಗದಳದ ಪ್ರಾಂತ ಸಂಚಾಲಕ ರಘು ಸಕಲೇಶಪುರ ನೇತೃತ್ವದಲ್ಲಿ ಎನ್.ಆರ್.ಪುರ ಪಟ್ಟಣದ ಉಮಾ ಮಹೇಶ್ವರಿ ದೇವಾಲಯದ ಬಳಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಮನವರಿಕೆ ಮಾಡಿದರೂ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದರು.

ಈ ಸಂದರ್ಭದಲ್ಲಿ ಪೊಲೀಸರು ಬಜರಂಗದಳ ಕಾರ್ಯಕರ್ತರು, ಮುಖಂಡರನ್ನು ವಶಕ್ಕೆ ಪಡೆಯಲು ಮುಂದಾದಾರು. ಈ ವೇಳೆ ಪೊಲೀಸರು ಹಾಗೂ ಮುಖಂಡರ ನಡುವೆ ತಳ್ಳಾಟ, ನೂಕಾಟ ನಡೆದು ತೀವ್ರ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಈ ಘಟನೆಯಿಂದ ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣವೂ ನಿರ್ಮಾಣವಾಗಿತ್ತು. ಪರಿಸ್ಥಿತಿ ಕೈಮೀರುವ ಮುನ್ನ ಪೊಲೀಸರು ಕರಗುಂದ ಚಲೋ ಚಳವಳಿಗೆ ಮುಂದಾಗಿದ್ದ ಎಲ್ಲ ಮುಖಂಡರನ್ನು ವಶಕ್ಕೆ ಪಡೆದು ಪ್ರತಿಭಟನಾಕಾರರನ್ನು ಚದುರಿಸಿದರು. ಇದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಶೃತಿ, ಕೊಪ್ಪ ಡಿವೈಎಸ್ಪಿ ಸ್ಥಳದಲ್ಲೇ ಇದ್ದು ಭದ್ರತೆಯ ಉಸ್ತುವಾರಿ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News