ಗುಂಡು ಹಾರಿಸಲು ಕರೆ ನೀಡಿದ ಬಿಜೆಪಿ ಮುಖಂಡ ಸಿ.ಟಿ ರವಿ: ನೆಟ್ಟಿಗರಿಂದ ತಪರಾಕಿ

Update: 2022-01-05 18:35 GMT

ಬೆಂಗಳೂರು: ಒಂದಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಇದೀಗ ಹಿಂಸಾಚಾರಕ್ಕೆ ಕರೆ ನೀಡಿ ವಿವಾದ ಸೃಷ್ಟಿಸಿಕೊಂಡಿದ್ದಾರೆ. 

"ದೇಶ್ ಕೆ ಗದ್ದಾರೋಂ ಕೋ ಗೋಲಿ ಮಾರೋ" ಎಂದು ಸಿಟಿ ರವಿ ಹಾಕಿರುವ ಟ್ವೀಟ್ ವಿವಾದದ ಕಿಡಿ ಹೊತ್ತಿಸಿದೆ. ರಾಜಾರೋಷವಾಗಿ ಹಿಂಸಾಚಾರಕ್ಕೆ ಪ್ರಚೋದಿಸುವ ಕರೆಯನ್ನು ನೀಡಿದ ಸಿಟಿ ರವಿಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ಷೇಪಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಭಧ್ರತಾ ಲೋಪದ ಹಿನ್ನೆಲೆಯಲ್ಲಿ ಸಿಟಿ ರವಿ ಈ ರೀತಿ ಟ್ವೀಟ್ ಮಾಡಿದ್ದರು. ಬಹಳಷ್ಟು ಬಿಜೆಪಿ ನಾಯಕರು ಈ ಘಟನೆ ಕುರಿತಂತೆ ಪಂಜಾಬ್ ಸರ್ಕಾರ ಹಾಗೂ ಕಾಂಗ್ರೆಸ್ ಅನ್ನು ಟೀಕಿಸಿದ್ದರು. ಸ್ಮೃತಿ ಇರಾನಿ 'ಪ್ರಧಾನಿಯನ್ನು ಹತ್ಯೆಗೈಯುವ ಕಾಂಗ್ರೆಸ್ ಸಂಚು' ವಿಫಲಗೊಂಡಿದೆ ಎಂದು ಹೇಳಿದ್ದರು. ಈ ನಡುವೆ ಸಿಟಿ ರವಿ ದೇಶ ದ್ರೋಹಿಗಳಿಗೆ ಗುಂಡು ಹಾರಿಸಿ ಎಂದು ಟ್ವೀಟ್ ಹಾಕಿದ್ದಾರೆ. 

ಸಿಟಿ ರವಿ ಟ್ವೀಟ್ ಹಾಕುತ್ತಿದ್ದಂತೆ ವಿವಾದ ಉಲ್ಬಣಿಸಿದ್ದು, ಇದು ಟ್ವಿಟರ್ ಪಾಲಿಸಿಗಳಿಗೆ ವಿರುದ್ಧವಾಗಿದ್ದು, ತಕ್ಷಣವೇ ಟ್ವೀಟ್ ಡಿಲಿಟ್ ಮಾಡಿ ಕ್ಷಮೆ ಕೇಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. 

ಕನ್ನಡ ಹೋರಾಟಗಾರ ಗಣೇಶ್ ಚೇತನ್, ಸಿಟಿ ರವಿ ಟ್ವೀಟ್ ಉಲ್ಲೇಖಿಸಿ ಮರು ಟ್ವೀಟ್ ಮಾಡಿದ್ದು, ಸಿಟಿ ರವಿಯನ್ನು ಸಂಘಿ ಗೂಂಡ ಎಂದು ಕರೆದಿದ್ದಾರೆ. 
ಅಖಿಲ ಭಾರತ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್ ಸಾಯಿ ಬಾಲಾಜಿ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು ಇನ್ನೋರ್ವ ಬಿಜೆಪಿ ನಾಯಕ ಬಹಿರಂಗವಾಗಿ ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ ಎಂದಿದ್ದಾರೆ.

ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸ್ ಎಂಬವರು ಸಿಎಂ ಬೊಮ್ಮಾಯಿ ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದು, ನಿಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೇ ಹಿಂಸಾಚಾರಕ್ಕೆ ಕರೆ ನೀಡುತ್ತಿದ್ದಾರೆಂದರೆ ನಮ್ಮ ರಾಜ್ಯ ಎಷ್ಟು ಸುರಕ್ಷಿತವಾಗಿದೆ ಎಂದು ಪ್ರಶ್ನಿಸಿದ್ದಾರೆ.  

ಇದಲ್ಲದೆ ಹಲವಾರು ಮಂದಿ ಟ್ವಿಟರ್ ನ್ನು ತರಾಟೆಗೆ ತೆಗೆದುಕೊಂಡಿದ್ದು ಇಂತಹ ಟ್ವೀಟ್‌ಗಳನ್ನು ಹೇಗೆ ಸಹಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News