×
Ad

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ 3,885 ಕೋಟಿ ರೂ.ನೀಡಲು ಸಂಪುಟ ಒಪ್ಪಿಗೆ: ಸಚಿವ ಮಾಧುಸ್ವಾಮಿ

Update: 2022-01-06 18:03 IST

ಬೆಂಗಳೂರು, ಜ. 6: ನಗರ ಸ್ಥಳೀಯ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು 3,885 ಕೋಟಿ ರೂ.ಗಳ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ನಾಲ್ಕನೆ ಹಂತದ ಕ್ರಿಯಾ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022-23ರಿಂದ 24-25ನೆ ಸಾಲಿನ ಈ ಕ್ರಿಯಾ ಯೋಜನೆಯನ್ನು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಮೂಲಸೌಲಭ್ಯಗಳ ಕೊರತೆ ನೀಗಿಸಲು ರೂಪಿಸಲಾಗಿದೆ ಎಂದು ವಿವರಿಸಿದರು.

‘ಅಮೃತ ನಗರೋತ್ಥಾನ ನಾಲ್ಕನೆ ಹಂತದ ಯೋಜನೆಯಿಂದ 23 ಜಿಲ್ಲಾ ಕೇಂದ್ರದ ನಗರಸಭೆಗಳು ಮತ್ತು ಗ್ರೇಡ್-1 ದರ್ಜೆಯ ನಗರಸಭೆಗಳಿಗೆ ತಲಾ 40 ಕೋಟಿ ರೂ.ಗಳಂತೆ ಒಟ್ಟು 920 ಕೋಟಿ ರೂ.ನಿಗದಿ ಮಾಡಲಾಗಿದೆ. ಉಳಿದ 38 ನಗರಸಭೆಗಳಿಗೆ ತಲಾ 30 ಕೋಟಿ ರೂ.ಗಳಂತೆ 1,140 ಕೋಟಿ ರೂ.ಹಂಚಿಕೆ ಮಾಡಲಾಗಿದೆ ಎಂದರು.

►‘124 ಪುರಸಭೆಗಳಿಗೆ ತಲಾ 10 ಕೋಟಿ ರೂ.ನಂತೆ 1,240 ಕೋಟಿ ರೂ.ಹಾಗೂ 117 ಪಟ್ಟಣ ಪಂಚಾಯಿತಿಗಳಿಗೆ ತಲಾ 5ಕೋಟಿ ರೂ.ನಂತೆ 585 ಕೋಟಿ ರೂ.ನೀಡಲಾಗಿದೆ. ಈ ಯೋಜನೆ ಅಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಒದಗಿಸಿದ ಒಟ್ಟು ಮೊತ್ತದಲ್ಲಿ ಶೇ.24.10ರಷ್ಟು ಹಣವನ್ನು ಪರಿಶಿಷ್ಟ ಜಾತಿ/ಗಿರಿಜನ ಉಪಯೋಜನೆಗಳಿಗೆ ಸೇರಿದ ಜನ ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಶೇ.5ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಮತ್ತು ಶೇ.7.25ರಷ್ಟು ಅನುದಾನವನ್ನು ಇತರೆ ಬಡಜನರ ಕಲ್ಯಾಣಕ್ಕಾಗಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಮೀಸಲಿಡಲು ನಿರ್ಧರಿಸಲಾಗಿದೆ.

► ಅಂಬರೀಶ್ ಸ್ಮಾರಕ ಅಭಿವೃದ್ಧಿ: ಕೇಂದ್ರದ ಮಾಜಿ ಸಚಿವ ಹಾಗೂ ಚಿತ್ರನಟ ಡಾ.ಎಂ.ಎಚ್.ಅಂಬರೀಶ್ ಸ್ಮಾರಕವನ್ನು ಇಲ್ಲಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ 12 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಅಲ್ಲದೆ, ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಷಕರ ಹುದ್ದೆಗಳ ನೇರ ನೇಮಕಕ್ಕೆಅನುಮತಿ ನೀಡಿದ್ದು, ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವವರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂದರು.

►ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಾಮಗಾರಿಗೆ 19.73 ಕೋಟಿ ರೂ.ಗಳ ಪರಿಷ್ಕøತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. ‘ಜಲ ಜೀವನ್ ಮಿಷನ್' ಯೋಜನೆಯಡಿ ವಿಶ್ವಬ್ಯಾಂಕ್ ಹಣಕಾಸಿನ ನೆರವಿನಿಂದ ರಾಜ್ಯಾದ್ಯಂತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮನೆ ಮನೆಗೆ ನಲ್ಲಿ ಮೂಲಕ ನೀರು ಒದಗಿಸುವ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

►ಅಂಬೇಡ್ಕರ್ ಭವನಕ್ಕೆ ನೆರವು: ಮೈಸೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗಳ 2ನೆ ಹಂತದಲ್ಲಿ ಒಳಾಂಗಣ ಮತ್ತು ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು 16.50ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

►300 ಎಲೆಕ್ಟ್ರಿಕ್ ಬಸ್ ಖರೀದಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ), ರಾಜ್ಯ ಸರಕಾರದ 100 ಕೋಟಿ ರೂ.ವೆಚ್ಚದಲ್ಲಿ ಕೇಂದ್ರ ಸರಕಾರ ಪ್ರತಿ ಬಸ್‍ಗೆ ನೀಡುವ ಗರಿಷ್ಠ ಬೇಡಿಕೆ ಪ್ರೋತ್ಸಾಹ ಧನ ಸೇರಿಸಿಕೊಂಡು ಒಟ್ಟು 300 ಎಲೆಕ್ಟ್ರಿಕ್ ಬಸ್‍ಗಳನ್ನು ಖರೀದಿ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

► ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಿಶ್ವವಿಖ್ಯಾತ ಜೋಗ ಜಲಪಾತದ ಅಭಿವೃದ್ಧಿ ದೃಷ್ಟಿಯಿಂದ ಸರಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಐಷಾರಾಮಿ ಹೊಟೇಲ್ ಮತ್ತು ಶರಾವತಿ ನದಿಗೆ ಅಡ್ಡಲಾಗಿ ರೋಪ್ ವೇಯನ್ನು 116 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಅವರು ವಿವರ ನೀಡಿದರು.

►ಬಿಬಿಎಂಪಿಯ ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿ ಅಡಿಯಲ್ಲಿ 2016-17ನೆ ಸಾಲಿನಿಂದ ಕೆಲವು ತೆರಿಗೆದಾರರು ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡಿರುವ ಪ್ರಕರಣಗಳಲ್ಲಿ, ಪಾವತಿ ಮಾಡಬೇಕಾದ ವ್ಯತ್ಯಾಸದ ಮೊತ್ತಕ್ಕೆ ದುಪ್ಪಟ್ಟು ದಂಡ ಮತ್ತು ಬಡ್ಡಿಯನ್ನು ತೆರಿಗೆದಾರರು ಪಾವತಿಸಲು ಒಪ್ಪಿಗೆ ನೀಡಲಾಗಿದೆ. ಪಾಲಿಕೆಯ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ಮೇಲೆ ಶೇ.2ರಷ್ಟು ನಗರ ಭೂ ಸಾರಿಗೆ ಉಪಕರವನ್ನು ವಿಧಿಸದೇ ಇರುವುದನ್ನು(ಅಂದಾಜು 238 ಕೋಟಿ ರೂ.ಗಳು) ಮನ್ನಾ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದರು.

► ಬೆಂಗಳೂರು ಜಲಮಂಡಳಿಯ ತೊರೆಕಾಡನಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯ ಕಾವೇರಿ 1, 2, 3ನೆ ಹಂತ ಜಲರೇಚಕ ಯಂತ್ರಾಗಾರಗಳಲ್ಲಿ ವಿದ್ಯುತ್ ಸ್ವಿಚ್ ಗೇರ್ ಗಳ ಪುನರ್ ನಿರ್ಮಾಣ ಕಾಮಗಾರಿಯ 44.50 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕೋಲಾರ ಜಿಲ್ಲೆ, ಮುಳಬಾಗಿಲು ಪಟ್ಟಣದಲ್ಲಿ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯ 16.80 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ.

► ಬಂಟರ ಸಂಘಕ್ಕೆ ಭೂಮಿ ಮಂಜೂರು: ಉಡುಪಿ ಜಿಲ್ಲೆ, ಕಾಪು ತಾಲೂಕಿನ ಶ್ರೀ ಜನಾರ್ದನ ದೇವಾಲಯಕ್ಕೆ ಸೇರಿದ ಪಡು ಗ್ರಾಮದ ಸರ್ವೆ ನಂ.37/10ರಲ್ಲಿರುವ 0.10 ಎಕರೆ ಜಾಗವನ್ನು ಕಾಪು ಬಂಟರ ಸಂಘ(ರಿ)ಕ್ಕೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ. ಬೆಂಗಳೂರು ಪೂರ್ವ ತಾಲೂಕು ಕೆ.ಆರ್.ಪುರಂ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಏತ ನೀರಾವರಿ ಯೋಜನೆಯ ಮೂಲಕ ಬೆಂಗಳೂರು (ಪೂರ್ವ) ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಹಾಗೂ ಹೊಸಕೋಟೆ ತಾಲೂಕಿನ ದೊಡ್ಡಕೆರೆಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಪುನರುಜ್ಜೀವನ ಕಾಮಗಾರಿಗಳನ್ನು ಒಟ್ಟಾರೆ 93.50 ಕೋಟಿ ರೂ.ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News