ಗ್ರಾ.ಪಂ. ವಿದ್ಯುತ್ ಬಿಲ್ ಪಾವತಿಗೆ ‘ಇ-ಬೆಳಕು' ತಂತ್ರಾಂಶ: ಸಚಿವ ಕೆ.ಎಸ್.ಈಶ್ವರಪ್ಪ
ಬೆಂಗಳೂರು, ಜ. 6: ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಬಹುದಿನಗಳಿಂದ ಬಾಕಿ ಉಳಿದಿದ್ದ 4,229 ಕೋಟಿ ರೂಪಾಯಿ ಕುಡಿಯುವ ನೀರು ಮತ್ತು ಬೀದಿ ದೀಪದ ವಿದ್ಯುತ್ ಬಿಲ್ ಅನ್ನು ಕೂಡಲೇ ಇಂಧನ ಇಲಾಖೆಗೆ ಪಾವತಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ಸಮಿತಿ ಕೊಠಡಿಯಲ್ಲಿ ಗ್ರಾ.ಪಂ.ಗಳಿಂದ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ನೇರವಾಗಿ ಹಣ ಪಾವತಿಸಲು ಬಳಸುವ ‘ಇ-ಬೆಳಕು' ಮತ್ತು ‘ಗಾಂಧಿ ಸಾಕ್ಷಿ ಕಾಯಕ 2.0' ತಂತ್ರಾಂಶಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, 2017ರಿಂದಲೂ ಗ್ರಾಮ ಪಂಚಾಯತ್ ಗಳ ವಿದ್ಯುತ್ ಬಿಲ್ ಪಾವತಿ ಬಾಕಿ ಉಳಿದಿದೆ ಎಂದರು.
ಗ್ರಾ.ಪಂ.ಗಳ ವಿದ್ಯುತ್ ಬಿಲ್ ಬಾಕಿ ಸಂಬಂಧ ಇಂಧನ ಸಚಿವ ವಿ.ಸುನೀಲ್ ಕುಮಾರ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೂ ಚರ್ಚಿಸಲಾಗುವುದು ಎಂದ ಅವರು, ಇ-ಬೆಳಕು ತಂತ್ರಾಂಶ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 1,378 ಗ್ರಾ.ಪಂ.ಗಳಲ್ಲಿ ತಕ್ಷಣದಿಂದ ಅನುಷ್ಠಾನಕ್ಕೆ ಬರಲಿದೆ. ಉಳಿದ ಜಿಲ್ಲೆಗಳಲ್ಲಿಯೂ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.
‘ಗಾಂಧಿ ಸಾಕ್ಷಿ ಕಾಯಕ 2.0' ತಂತ್ರಾಂಶದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಕಾಮಗಾರಿಗಳ ವಿವರ ದಾಖಲಿಸಲಾಗುವುದು. ಇದರಿಂದ ಹಣದ ಸೋರಿಕೆ ತಡೆಯಲು ಸಾಧ್ಯವಾಗಲಿದೆ ಎಂದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾಮಗಾರಿಗಳ ಪಾರದರ್ಶಕತೆಗೆ ಅನುಕೂಲವಾಗಲಿದೆ ಎಂದು ಅವರು ನುಡಿದರು.
ಇ-ಬೆಳಕು ತಂತ್ರಾಂಶದಿಂದ ವಿದ್ಯುತ್ ಬಿಲ್‍ಗಳ ವಿವರ ಗೊತ್ತಾಗಲಿದೆ. ಬೀದಿ ದೀಪ, ಕುಡಿಯುವ ನೀರಿನ ವಿದ್ಯುತ್ ಬಿಲ್‍ನ ಬಾಕಿ, ಪರಿಶೀಲನೆ, ಪಾವತಿ ಸೇರಿದಂತೆ ಎಲ್ಲ ಮಾಹಿತಿಯೂ ಬೆರಳತುದಿಯಲ್ಲೇ ಸಿಗಲಿದೆ. ರಾಜ್ಯದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂಧನ ಸಚಿವ ವಿ.ಸುನೀಲ್ ಕುಮಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ, ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತೆ ಶಿಲ್ಪಾ ನಾಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.