ಮಾರ್ಗಸೂಚಿ ಅನುಸರಿಸಿ ಪಾದಯಾತ್ರೆ ಮಾಡಲು ಅಡ್ಡಿಯಿಲ್ಲ: ಸಚಿವ ಮಾಧುಸ್ವಾಮಿ
ಬೆಂಗಳೂರು, ಜ. 6: ‘ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕು ಹರಡುವುದನ್ನು ತಡೆಗಟ್ಟುವ ದೃಷ್ಟಿಯಿಂದ ಜ.19ರ ಮಾರ್ಗಸೂಚಿ ಹೊರಡಿಸಲಾಗಿದೆಯೆ ಹೊರತು ಕಾಂಗ್ರೆಸ್ ಪಾದಯಾತ್ರೆ ಮಾರ್ಗಕ್ಕೆ ಸೀಮಿತವಾಗಿ ನಿಯಮ ರೂಪಿಸಿಲ್ಲ' ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ನಿರ್ಬಂಧ ಅಗತ್ಯವಿಲ್ಲ ಎಂದು ಸಂಪುಟದಲ್ಲಿ ಕೆಲ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಸಂಬಂಧ ಜ.14 ಅಥವಾ 15ಕ್ಕೆ ಮತ್ತೊಮ್ಮೆ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಿರ್ಬಂಧ ಸಡಿಲಿಸಲು ತೀರ್ಮಾನ ಮಾಡಲಾಗುವುದು ಎಂದರು.
‘ಕಾಂಗ್ರೆಸ್ ಪಾದಯಾತ್ರೆಗೂ, ಕೋವಿಡ್ ಮಾರ್ಗಸೂಚಿ ಜಾರಿಗೂ ಯಾವುದೇ ಸಂಬಂಧವಿಲ್ಲ. ಬೆಳಗಾವಿ, ಬಾಗಲಕೋಟೆಗೂ ಪಾದಯಾತ್ರೆಗೂ ಸಂಬಂಧವಿಲ್ಲ. ಆದರೂ ಎಲ್ಲ ಕಡೆಗಳಲ್ಲಿ ಏಕರೂಪದ ನಿಯಮ ಜಾರಿ ಮಾಡಲು ತೀರ್ಮಾನಿಸಿದ್ದೇವೆ. ಕೋವಿಡ್ ಮಾರ್ಗಸೂಚಿ ಪಾಲಿಸಿ ಪಾದಯಾತ್ರೆ ಮಾಡಲು ಯಾವುದೇ ಅಡ್ಡಿಯಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.
ಪ್ರತಿಪಕ್ಷ ಕಾಂಗ್ರೆಸ್‍ನವರು ಪಾದಯಾತ್ರೆ ಮಾಡುವುದರಿಂದ ಸರಕಾರಕ್ಕೆ ಯಾವುದೇ ದೊಡ್ಡ ಗಂಡಾಂತರ ಏನಿಲ್ಲ. ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕಿ ಅತ್ಯಂತ ವೇಗವಾಗಿ ಹರಡುವ ಸಾಮಥ್ರ್ಯವಿದೆ. ಹೀಗಾಗಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮೊದಲನೆ ಮತ್ತು ಎರಡನೆ ಅಲೆ ಸಂದರ್ಭದಲ್ಲಿ ಆಗದಂತಹ ಅವಘಡಗಳು ಘಟಿಸಬಾರದು ಎಂಬುದು ಸರಕಾರದ ಉದ್ದೇಶ ಎಂದರು.
ಅಭ್ಯರ್ಥಿಗಳಿಗೆ ನ್ಯಾಯ:
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) 2011ನೆ ಸಾಲಿನಲ್ಲಿ ಆಯ್ಕೆಯಾಗಿದ್ದ 362 ಮಂದಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಮಾನಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿ ಒದಗಿಸಲು ನನಗೆ ಸೂಚಿಸಿದ್ದಾರೆ. ಹೀಗಾಗಿ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸಲಿದೆ.
-ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ