''ಯತ್ನಾಳ್ ರಾಜಕೀಯ ಭವಿಷ್ಯಕಾರ ಇದ್ದಂತೆ'': ಬಸವ ಜಯಮೃತ್ಯುಂಜಯ ಶ್ರೀ
Update: 2022-01-06 20:48 IST
ಧಾರವಾಡ, ಜ.6: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯ ಭವಿಷ್ಯಕಾರ ಇದ್ದಂತೆ, ಅವರು ಏನು ಹೇಳುತ್ತಾರೋ ಅದು ಎಲ್ಲ ಸತ್ಯವಾಗಿದೆ ಎಂದು ಕೂಡಲ ಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಗುರುವಾರ ಧಾರವಾಡ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷದಿಂದ ನಮ್ಮ ಹೋರಾಟದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಇದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಅವರು ಒಂದು ಮಾತು ಹೇಳಿದ್ದರು. ಅದು ಸಹ ಎರಡು ತಿಂಗಳಲ್ಲಿ ನೆರವೇರಿದೆ. ಯತ್ನಾಳ್ ಹೇಳುತ್ತಿರುವುದೆಲ್ಲವೂ ನಿಜವಾಗುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಕೂಡ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸುತ್ತಾರೆ ಎಂದರು.
ಬಜೆಟ್ ಒಳಗಾಗಿ ಸಿಎಂ ಮೀಸಲಾತಿ ಕೊಡುತ್ತಾರೆ ಎಂದು ಯತ್ನಾಳ್ ಹೇಳಿದ್ದಾರೆ. ಈಗಾಗಲೇ ಸಮಾಜದ ನಾಲ್ವರು ಮುಖಂಡರ ಜೊತೆ ಸಿಎಂ ಮಾತನಾಡಿದ್ದಾರೆ. ಹಿಂದುಳಿದ ಸಮಾಜಕ್ಕೆ ಅನ್ಯಾಯವಾಗದಂತೆ ನಮಗೆ ನ್ಯಾಯ ಕೊಡುವುದಾಗಿ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.