ಪಾಳಿ ಪದ್ಧತಿಯಲ್ಲಿ ಶಾಲೆ ನಡೆಸಲು ಅನುಮತಿ ನೀಡಿ: ಸರಕಾರಕ್ಕೆ ಖಾಸಗಿ ಶಾಲಾ ಒಕ್ಕೂಟ ಮನವಿ
ಬೆಂಗಳೂರು, ಜ.6: ಪಾಳಿ ಪದ್ಧತಿಯಲ್ಲಿ ಶಾಲೆಗಳನ್ನು ನಡೆಸಲು ಅನುಮತಿ ನೀಡುವಂತೆ ಖಾಸಗಿ ಶಾಲಾ ಒಕ್ಕೂಟ ಸರಕಾರಕ್ಕೆ ಮನವಿ ಮಾಡಿದೆ.
ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಶಾಲೆಗಳನ್ನು ಬಂದ್ ಮಾಡಿದ್ದು, ಇದು ಶೈಕ್ಷಣಿಕ ವ್ಯವಸ್ಥೆಗೆ ಮಾರಕವಾಗಲಿದೆ. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಸರಿಯಾಗಿ ಶಾಲೆಗಳು ನಡೆಯದೆ ಈಗಾಗಲೇ ಬಹಳ ಕಷ್ಟ ಅನುಭವಿಸುವಂತಾಗಿದೆ. ಮತ್ತೆ ಈಗ ಬಂದ್ ಮಾಡಿರುವುದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ ಎಂದು ಒಕ್ಕೂಟ ಅಭಿಪ್ರಾಯ ವ್ಯಕ್ತಪಡಿಸಿದೆ.
ಈಗಾಗಲೇ ಒಕ್ಕೂಟ ಶಿಕ್ಷಣ ಸಚಿವರಿಗೂ ಪತ್ರ ಬರೆದಿದೆ. ಬೆಂಗಳೂರಿನ ಶಾಲೆಗಳು ಬಂದ್ ಆದರೆ ಶೇ.40ರಷ್ಟು ಹೊಡೆತ ಬೀಳಲಿದೆ ಎಂದು ಶಾಲಾ ಒಕ್ಕೂಟ ತಿಳಿಸಿದೆ.
ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತಿರುವುರಿಂದ ಶಾಲೆಗಳನ್ನು ಬಂದ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲೂ ಸೋಂಕು ಹೆಚ್ಚಾದರೆ ಅಲ್ಲೂ ಬಂದ್ ಮಾಡಲಾಗುತ್ತದೆ. ಇದರಿಂದ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತದೆ. ಹೀಗಾಗಿ, ಪಾಳಿ ಪದ್ಧತಿಯಲ್ಲಿ ಶಾಲೆ ಆರಂಭಕ್ಕೆ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ.