ಮೈಸೂರು: ಮತಾಂತರವಾಗದಿದ್ದಕ್ಕೆ ಸಹೋದರನಿಂದಲೇ ಕಿರುಕುಳ, ಮಾರಣಾಂತಿಕ ಹಲ್ಲೆ; ಆರೋಪ

Update: 2022-01-06 17:05 GMT

ಮೈಸೂರು,ಜ.6: *ಬಲವಂತದ ಮತಾಂತರವಾಗದಿದ್ದಕ್ಕೆ ನನ್ನ ಸಹೋದರ ಮನೋಹರ್ ಕೆ. ನನಗೆ ಮತ್ತು ನನ್ನ ಪತ್ನಿಗೆ ಕಿರುಕುಳ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ*, ಹಾಗಾಗಿ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಯದುನಂದನ್ ಕೆ. ಕುಟುಂಬ ಮಾಧ್ಯಮದ ಮುಂದೆ ಅಲವತ್ತುಕೊಂಡರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕು ಟೈಗರ್ ಬ್ಲಾಕ್ ನಿವಾಸಿ ಯದುನಂದನ್ ಕೆ. ಮಾತನಾಡಿ, ನನ್ನ ಸಹೋದರ ಮನೋಹರ್ ಕೆ. ಕಳೆದ ಹದಿನೈದು ವರ್ಷಗಳ ಹಿಂದೆಯೇ ಮಂಗಳೂರು, ಕೇರಳ ಮತ್ತು ಇತರೆಡೆಗಳಿಗೆ ಹೋಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾನೆ. ಅಲ್ಲಿಂದ ಬಂದ ಮೇಲೆ ನಮ್ಮ ಗ್ರಾಮದಲ್ಲಿ ಅನೇಕರನ್ನು ಮತಾಂತರ ಮಾಡಿದ್ದಾನೆ. ನನ್ನ ಮತ್ತು ನನ್ನ ಕುಟುಂಬದವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ  ಕಳೆದ ಏಳೆಂಟು ವರ್ಷಗಳಿಂದ  ಒತ್ತಾಯ ಮಾಡುತ್ತಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ  ಅವರು ಯಾವುದೇ ಕ್ರಮ ಕೈಗೊಳ್ಳದೆ. ನನ್ನ ವಿರುದ್ಧವೇ ಧಮಕಿ ಹಾಕಿ  ರಾಜೀಮಾಡಿ ಕಳುಹಿಸುತ್ತಿದ್ದರೂ ಎಂದು ಆರೋಪಿಸಿದರು.

ಡಿಸೆಂಬರ್ 30 ರಂದು ರಾತ್ರಿ 7.30 ರ ಸಮಯದಲ್ಲಿ ನಾನು ಮತ್ತು ನನ್ನ ಪತ್ನಿ ಸುಧಾರಾಣಿ ಇಬ್ಬರೆ ಮನೆಯಲ್ಲಿದ್ದ ವೇಳೆ ಮನೋಹರ್ ಕೆ. ಭಾಗ್ಯ, ಆಶಿಶ್, ನಿತ್ಯಾನಂದ, ಮಧನ್, ಪ್ರಭಾಕರ ಮತ್ತು ರಾಧಿಕ ಏಕಾ ಏಕಿ ನುಗ್ಗಿ ಮಚ್ಚು ಮತ್ತು ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ನನಗೆ ಕೈ ಮೂಳೆ ಮುರಿದಿದ್ದು, ನನ್ನ ಪತ್ನಿ ಸುಧಾರಾಣಿಗೆ ಕಾಲಿನ ಮೂಳೆ ಮುರಿದಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಾಗಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದರು.

ನನಗೆ ಪತ್ನಿ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿದ್ದೇನೆ. ಸದ್ಯ ನಾನು ಮತ್ತು ಪತ್ನಿ ಕೃಷಿ ಚಟುವಟಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನನ್ನ ಸಹೋದರ ಮನೋಹರ್ ಕೆ. ಅವರಿಂದ ಜೀವ ಭಯ ಇದ್ದು ನಮಗೆ  ನ್ಯಾಯ ದೊರಕಿಸಿ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಯದುನಂದನ್ ಕೆ. ಅವರ ಪತ್ನಿ ಸುಧಾರಾಣಿ, ಪುತ್ರಿ ಪಲ್ಲವಿ ಮತ್ತು ಅಳಿಯ ಚಂದ್ರಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News