ಕೋವಿಡ್ ನಿರ್ಬಂಧಗಳಿಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲೇ ವಿರೋಧ
ಬೆಂಗಳೂರು: ಕೋವಿಡ್-19 ತೀವ್ರತೆ ಕಡಿಮೆ ಇರುವ ಜಿಲ್ಲೆಗಳಲ್ಲೂ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯ ಸಚಿವ ಸಂಪುಟದಲ್ಲೇ ವಿರೋಧ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.
ಸೋಂಕು ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಹೇರಬಾರದು ಎಂದು ಸಂಪುಟ ಸಹೋದ್ಯೋಗಿಗಳು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು ಎಂದು ಹೇಳಲಾಗಿದೆ. ವಾರಾಂತ್ಯ ಕರ್ಫ್ಯೂ ವೇಳೆಯೂ ಮದ್ಯದ ಅಂಗಡಿಗಳು ಕಾರ್ಯ ನಿರ್ವಹಿಸಲು ಅನುಮತಿ ನೀಡಬೇಕು ಎಂದೂ ಆಗ್ರಹಿಸಿದರು.
ಆದರೆ ಸರ್ಕಾರ ಸದ್ಯಕ್ಕೆ ಕೋವಿಡ್-19 ಶಿಷ್ಟಾಚಾರವನ್ನು ಬದಲಿಸದಿರಲು ನಿರ್ಧರಿಸಿದೆ. ಈಗಾಗಲೇ ಪ್ರಕಟಿಸಿರುವಂತೆ ಜನವರಿ 19ರಂದು ಮುಂಜಾನೆ 5 ಗಂಟೆವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ. "ಹಲವು ನಾಗರಿಕ ಸಮಾಜ ಸಂಘಟನೆಗಳು ತಮ್ಮ ಬೇಡಿಕೆ ಮುಂದಿಟ್ಟಿವೆ. ಮದ್ಯದ ಅಂಗಡಿ ತೆರೆಯುವುದು ಮತ್ತಿತರ ವಿಷಯದ ಬಗ್ಗೆ ಸಂಪುಟ ಸಭೆಯಲ್ಲೂ ಚರ್ಚಿಸಲಾಗಿದೆ. ಇದುವರೆಗೂ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ" ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸೋಂಕಿನ ತೀವ್ರತೆಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಆದರೆ ಜನವರಿ 14 ಅಥವಾ 15ರಂದು ನಿಯಮಾವಳಿಗಳನ್ನು ಸರ್ಕಾರ ಪರಿಷ್ಕರಿಸಲಿದೆ ಎಂಬ ಸುಳಿವನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೀಡಿದ್ದಾರೆ.
ಎಲ್ಲೆಡೆ ಒಂದೇ ಮಾರ್ಗಸೂಚಿ ಹೇರದಂತೆ ಕೆಲ ಸಚಿವರು ಆಗ್ರಹಿಸಿದ್ದಾರೆ. ಸಾಧ್ಯವಿರುವ ಕಡೆಗಳಲ್ಲಿ ನಿರ್ಬಂಧ ಸಡಿಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಕೆಲ ದಿನಗಳ ಕಾಲ ಕಾದು ನೋಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆರ್‌ಡಿಪಿಆರ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಂಪುಟ ಸಭೆಯಲ್ಲಿ ನಿರ್ಬಂಧಗಳ ವಿರುದ್ಧ ಧ್ವನಿ ಎತ್ತಿದರು ಎಂದು ತಿಳಿದು ಬಂದಿದೆ.