×
Ad

ಸೋಮವಾರಪೇಟೆ: ಪತಿಯ ಕೊಲೆ: ಆರೋಪಿಗಳಾದ ಪತ್ನಿ, ಪ್ರಿಯಕರನ ಬಂಧನ

Update: 2022-01-07 11:04 IST

ಮಡಿಕೇರಿ, ಜ.7: ಪ್ರಿಯಕರನ ಸಹಾಯದಿಂದ ಪತಿಯನ್ನು ಹತ್ಯೆಗೈದ ಆರೋಪದಡಿ ಮೃತರ ಪತ್ನಿ  ಹಾಗೂ ಆಕೆಯ ಪ್ರಿಯಕರನನ್ನು ಹಾಸನ ಜಿಲ್ಲೆಯ ಎಸಳೂರು ಪೊಲೀಸರು ಬಂಧಿಸಿದ್ದಾರೆ.

ಸುಳುಗಳಲೆ ನಿವಾಸಿ ಸಂತೋಷ್(30) ಕೊಲೆಯಾದವರು. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಂತೋಷ್ ಪತ್ನಿ ಶ್ರುತಿ(24) ಹಾಗೂ ಆಕೆಯ ಪ್ರಿಯಕರನೆನ್ನಲಾದ ಸೋಮವಾರಪೇಟೆ ಪಟ್ಟಣದ ತ್ಯಾಗರಾಜ ಕಾಲನಿ ನಿವಾಸಿ ಚಂದ್ರಶೇಖರ್(20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರುತಿಗೂ ಚಂದ್ರಶೇಖರ್'ಗೂ ಅನೈತಿಕ ಸಂಬಂಧವಿತ್ತೆನ್ನಲಾಗಿದೆ. ಇದು ಪತಿ ಸಂತೋಷ್'ಗೆ ಗೊತ್ತಾದರೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಶ್ರುತಿ ಮತ್ತು ಚಂದ್ರಶೇಖರ್ ಸೇರಿ ಸಂತೋಷ್'ನನ್ನು ಕಳೆದ ಡಿ.26ರ ರಾತ್ರಿ ಕೊಲೆ ಮಾಡಿದ್ದರು. ಬಳಿಕ ಸಕಲೇಶಪುರ ತಾಲೂಕಿನ ಎಸಳೂರು ಪೊಲೀಸ್ ಠಾಣೆಗೆ ತೆರಳಿ ಮರಡಿ ಕೆರೆ ಗ್ರಾಮದ ಬಳಿ ಗಂಡ ಓಡಿಸುತ್ತಿದ್ದ ಬೈಕ್'ಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಗಂಡ ಸಂತೋಷ್ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಶ್ರುತಿ ದೂರು ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಸಂತೋಷ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಮೈಮೇಲೆ ಯಾವುದೇ ರೀತಿಯ ಗಾಯಗಳು ಕಂಡು ಬರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು ಶ್ರುತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಕೃತ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಎಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News