4,236 ಕೋಟಿ ರೂ.ಮೊತ್ತದ 87 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ: ಸಚಿವ ಮುರುಗೇಶ್ ನಿರಾಣಿ

Update: 2022-01-07 13:00 GMT

ಬೆಂಗಳೂರು, ಜ. 7: ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡಲು ಮುಂದಾಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು, ಒಟ್ಟು 4.236.26 ಕೋಟಿ ರೂ. ಮೊತ್ತದ ಒಟ್ಟು 87 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ ರಾಜ್ಯದಲ್ಲಿ ಸುಮಾರು 12,251ಕ್ಕೂ ಹೆಚ್ಚಿನ ಉದ್ಯೋಗಗಳು ಸೃಜನೆಯಾಗುವ ನಿರೀಕ್ಷೆ ಇದೆ.

ಶುಕ್ರವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಏಕಗವಾಕ್ಷಿ ತೆರವು ಸಮಿತಿ (ಎಸ್‍ಎಲ್‍ಡಬ್ಲ್ಯೂಸಿಸಿ) ಸಭೆಯಲ್ಲಿ ಮೇಲ್ಕಂಡ ಮಹತ್ವದ ತೀರ್ಮಾನ ಮಾಡಲಾಗಿದೆ. ಸಮಿತಿಯು 50 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯ 13 ಪ್ರಮುಖ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ಕೊಟ್ಟಿದೆ ಎಂದು ತಿಳಿಸಲಾಗಿದೆ. 

2,986.80 ಕೋಟಿ ರೂ.ಮೌಲ್ಯದ ಈ ಯೋಜನೆಗಳಿಗೂ ರಾಜ್ಯದಲ್ಲಿ 4,660 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಅಲ್ಲದೆ ಸಮಿತಿಯು ಸಭೆಯಲ್ಲಿ 15 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಾಗೂ 50 ಕೋಟಿ ರೂ.ಗಿಂತ ಕಡಿಮೆ ಹೂಡಿಕೆಯ 74 ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. 1249.46 ಕೋಟಿ ರೂ.ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 7,591 ಜನರಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಒಟ್ಟು 4,236.26 ಕೋಟಿ ರೂ.ಗಳ ಹೂಡಿಕೆಗೆ 12,251 ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ.

ಸಭೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೇ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಕೈಗಾರಿಕಾ ಅಭಿವೃದ್ಧಿ ಆಯುಕ್ತ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಎನ್.ಶಿವಶಂಕರ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜ್ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News