ಕೊಪ್ಪ: ಸ್ಕಾರ್ಫ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರ ಕಳುಹಿಸಿದ ಪ್ರಾಂಶುಪಾಲರು; ಆರೋಪ

Update: 2022-01-07 16:14 GMT

ಚಿಕ್ಕಮಗಳೂರು, ಜ.7: ಜಿಲ್ಲೆಯ ಕೊಪ್ಪ ಪಟ್ಟಣದ ಸರಕಾರಿ ಪಿಯು ಕಾಲೇಜಿನಲ್ಲಿ ಸ್ಕಾರ್ಫ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಕಾಲೇಜು ಪ್ರಾಂಶುಪಾಲರು ಹೊರ ಕಳುಹಿಸಿದ ಘಟನೆ ಶುಕ್ರವಾರ ವರದಿಯಾಗಿದೆ.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿಗಳು ಸಮವಸ್ತ್ರವಲ್ಲದೆ ಸ್ಕಾರ್ಫ್ ಧರಿಸಲು ಕಾಲೇಜಿನಲ್ಲಿ ಅವಕಾಶ ನೀಡಬಾರದು. ಅವರು ಸ್ಕಾರ್ಫ್ ಧರಿಸಿ ಬಂದಲ್ಲಿ ನಾವು ಕೇಸರಿ ಸಾಲು ಹಾಕಿ ಬರುತ್ತೆವೆಂದು ಪ್ರಾಂಶುಪಾಲರಿಗೆ ದೂರು ಹೇಳಿದ್ದಾರೆ.

ಈ ವೇಳೆ ಕಾಲೇಜು ಪ್ರಾಂಶುಪಾಲರು ಸಮವಸ್ತ್ರದೊಂದಿಗೆ ಸ್ಕಾರ್ಫ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಸೇರಿಸದೆ ಹೊರ ಕಳುಹಿಸಿದ್ದಾರೆಂದು ತಿಳಿದು ಬಂದಿದ್ದು, ಇದನ್ನು ವಿರೋಧಿಸಿದ ವಿದ್ಯಾರ್ಥಿನಿಯರು, ನಾವು ಸಮವಸ್ತ್ರದೊಂದಿಗೆ ಕಾಲೇಜಿನಲ್ಲಿ ನೀಡುವ ಸ್ಕಾರ್ಫ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದು, ಸದ್ಯ ದಿಢೀರನೆ ಸ್ಕಾರ್ಫ್ ಧರಿಸಬಾರದು ಎಂದರೆ ಹೇಗೆ? ಸ್ಕಾರ್ಫ್ ಇಲ್ಲದೆ ಕಾಲೇಜಿಗೆ ಬರುವುದಿಲ್ಲ ಎಂದು ಕಾಲೇಜು ಎದುರೇ ಧರಣಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಲೇಜಿನಿಂದ ಯಾವುದೇ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿಲ್ಲ. ಕಾಲೇಜಿನ ಕೆಲ ವಿದ್ಯಾರ್ಥಿಗಳು ಸ್ಕಾರ್ಫ್ ಸಂಬಂಧ ದೂರು ಹೇಳಿದ್ದರು. ಈ ಕಾರಣಕ್ಕೆ ಎರಡೂ ಕಡೆಯ ವಿದ್ಯಾರ್ಥಿಗಳ ಬಳಿ ಚರ್ಚಿಸಲು ಅವರನ್ನು ಕರೆಯಲಾಗಿತ್ತು. ಈ ಸಂಬಂಧ ಎರಡೂ ಸಮುದಾಯದ ವಿದ್ಯಾರ್ಥಿಗಳ ಬಳಿ ಚರ್ಚಿಸಿ ಪೋಷಕರು ಹಾಗೂ ಶಾಲಾಭಿವೃದ್ಧಿ ಮಂಡಳಿ ಸದಸ್ಯರ ಸಭೆ ನಡೆಸಿ ಅವರ ಸೂಚನೆಯಂತೆ ಕ್ರಮ ವಹಿಸುವುದಾಗಿ ತಿಳಿ ಹೇಳಿದ್ದೇನೆ. ಇದಕ್ಕೆ ವಿದ್ಯಾರ್ಥಿಗಳು ಸಹಮತ ನೀಡಿದ್ದಾರೆ. ಇದನ್ನು ಶಾಸಕರ ಗಮನಕ್ಕೂ ತರಲಾಗಿದ್ದು, ಪೋಷಕರ ಸಭೆ ನಡೆಸಲು ಅವರು ತಿಳಿಸಿದ್ದಾರೆ.

ಲಕ್ಷ್ಮೀನಾರಾಯಣ್,ಪ್ರಾಂಶುಪಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News