ಶ್ರೀರಂಗಪಟ್ಟಣ: ವಿದ್ಯಾರ್ಥಿನಿಯ ವಿವಸ್ತ್ರಗೊಳಿಸಿ ಶಿಕ್ಷೆ ನೀಡಿದ್ದ ಮುಖ್ಯ ಶಿಕ್ಷಕಿ ಅಮಾನತು

Update: 2022-01-07 16:53 GMT

ಮಂಡ್ಯ, ಜ.7: ಶಾಲೆಗೆ ಮೊಬೈಲ್​ ತಂದ ವಿದ್ಯಾರ್ಥಿನಿಗೆ  ಬಟ್ಟೆ ಬಿಚ್ಚಿ ಶಿಕ್ಷೆ ನೀಡಿದ್ದ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸ್ನೇಹಲತಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ತರಗತಿಗೆ ಮೊಬೈಲ್ ತಂದಿದ್ದ ಎಂಟನೇ ತರಗತಿ ವಿದ್ಯಾರ್ಥಿನಿಯನ್ನು ಬೇರೆ ಕೊಠಡಿಗೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ನಡೆದುಕೊಂಡಿರುವ ಆರೋಪ ಕೇಳಿ ಬಂದಿದ್ದು ತಡವಾಗಿ ವರದಿಯಾಗಿತ್ತು.

ಮುಖ್ಯ ಶಿಕ್ಷಕಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಗ್ರಾಮಸ್ಥರು ಅವರ ವಿರುದ್ಧ ಶಿಸ್ತುಕ್ರಮಕ್ಕೆ ಪಟ್ಟುಹಿಡಿದಿದ್ದರು.

ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಶಾಲೆಗೆ ಭೇಟಿ ನೀಡಿ ಬಾಲಕಿಯಿಂದ ಮಾಹಿತಿ ಪಡೆದು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ, ಮಂಡ್ಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮುಖ್ಯ ಶಿಕ್ಷಕಿಯ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದರು.

ಈ ಬಗ್ಗೆ ಡಿಡಿಪಿಐ ಜವರೇಗೌಡ ಶಿಸ್ತುಕ್ರಮಕ್ಕೆ ಶಿಕ್ಷಣ ಇಲಾಖೆಯ ಆಯುಕ್ತರಿಗೆ  ಶಿಫಾರಸ್ಸು ಮಾಡಿದ್ದರು. ಇಲಾಖೆಯ ಆಯುಕ್ತ ಡಾ.ವಿಶಾಲ್ ಮುಖ್ಯ ಶಿಕ್ಷಕಿಯನ್ನು ಸೇವೆಯಿಂದ ಅಮಾನತು ಮಾಡಿ  ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News