×
Ad

ವಿರಾಜಪೇಟೆ ಪ.ಪಂ ಪುರಸಭೆಯಾಗಿ ಮೇಲ್ದರ್ಜೆಗೆ

Update: 2022-01-07 23:58 IST

ಮಡಿಕೇರಿ ಜ.7 : ವಿರಾಜಪೇಟೆ ಪಟ್ಟಣ ಪಂಚಾಯ್ತಿಯನ್ನು ಆಡಳಿತಾತ್ಮಕ ದೃಷ್ಟಿಯ ಹಿನ್ನೆಲೆಯಲ್ಲಿ ‘ಪುರಸಭೆ’ಯನ್ನಾಗಿ ಸರ್ಕಾರ ಮೇಲ್ದರ್ಜೆಗೇರಿಸಿದ್ದು, ಇದರ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

ವಿರಾಜಪೇಟೆ ನಾಗರಿಕರ ಹಲಸಮಯಗಳ ನಿರೀಕ್ಷೆ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದರೊಂದಿಗೆ ಸಾಕಾರಗೊಂಡಂತಾಗಿದೆ. ವಿರಾಜಪೇಟೆ ತಾಲೂಕು ಶಾಸಕ ಕೆ.ಜಿ. ಬೋಪಯ್ಯ ಅವರ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯನ್ನಾಗಿ ಪರಿವರ್ತಿಸಲಾಗಿದೆ.

 ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಅನ್ವಯ, ರಾಜ್ಯಪಾಲರ ಆದೇಶದಂತೆ ವಿರಾಜಪೇಟೆ ಪಟ್ಟಣ ಪಮಚಾಯ್ತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿರುವ ಕುರಿತಾದ ಅಧಿ ಸೂಚನೆಯನ್ನು ಇದೇ ಜನವರಿ 4 ರಂದು ಪ್ರಕಟಿಸಲಾಗಿದ್ದು, ಇದೇ ದಿನಾಂಕದಿಂದ ಅಧಿಸೂಚನೆ ಅನ್ವಯವಾಗಲಿದೆಯೆಂದು ಸ್ಪಷ್ಟಪಡಿಸಲಾಗಿದೆ.

  ಯಾವುದೇ ಒಂದು ಪಟ್ಟಣವನ್ನು ‘ಪುರಸಭೆ’ಯನ್ನಾಗಿ ಮಾಡಲು 20 ಸಾಬಿರಕ್ಕೆ ಕಡಿಮೆ ಇಲ್ಲದ, 50 ಸಾವಿರ ಮೀರದ ಜನಸಂಖ್ಯೆ ಇರಬೇಕು. ವಿರಾಜಪೇಟೆಯಲ್ಲಿ 2011ರ ಜನಗಣತಿಯಂತೆ 21,058 ಜನಸಂಖ್ಯೆ ಇದ್ದು, ಪ್ರಸ್ತುತ 9.02 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದುವ ಮೂಲಕ, ಪುರಸಭೆಗೆ ಅಗತ್ಯವಿರುವ ಮಾನದಂಡವನ್ನು ಪೂರೈಸಿದೆ.

ಗ್ರಾಮಗಳ ಸೇರ್ಪಡೆ 

ವಿರಾಜಪೇಟೆ ಪಟ್ಟಣ ಪಂಚಾಯ್ತಿಯನ್ನು ‘ಪುರಸಭೆ’ಯನ್ನಾಗಿ ಮಾರ್ಪಡಿಸುವ ಹಚಿತದಲ್ಲಿ ಪಟ್ಟಣ ವ್ಯಾಪ್ತಿಗೆ ಚೆಂಬೆಬೆಳ್ಳೂರು ಗ್ರಾಮ ಪಂಚಾಯ್ತಿಯ ಕುಕ್ಲೂರು ಗ್ರಾಮದ ಭಾಗಶಃ, ಮಗ್ಗುಲ ಗ್ರಾಮದ ಭಾಗಶಃ ಪ್ರದೇಶವನ್ನು ಸೇರ್ಪಡೆ ಮಾಡಲಾಗಿದೆ. ಇದರೊಂದಿಗೆ ಬಿಟ್ಟಂಗಾಲ ಗ್ರಾಮ ಪಂಚಾಯ್ತಿಯ ಅಂಬಟ್ಟಿ ಗ್ರಾಮದ ಭಾಗಶಃ, ಆರ್ಜಿ ಗ್ರಾಮ ಪಂಚಾಯ್ತಿಯ ಆರ್ಜಿ ಗ್ರಾಮದ ಭಾಗಶಃ ಹಾಗೂ ಬೇಟೋಳಿ ಗ್ರಾಮ ಪಂಚಾಯ್ತಿಯ ಬೇಟೋಳಿ ಗ್ರಾಮದ ಭಾಗಶಃವನ್ನು ಸೇರ್ಪಡೆ ಮಾಡಲಾಗಿದೆ.

 ಆಕ್ಷೇಪಣೆಗೆ ಅವಕಾಶ

ವಿರಾಜಪೇಟೆ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯನ್ನಾಗಿ ಮಾರ್ಪಡಿಸುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಅಧಿಸೂಚನೆ ಪ್ರಕಟವಾದ ದಿನಾಂಕದಿಂದ ಒಂದು ತಿಂಗಳ ಒಳಗಾಗಿ ಆಕ್ಷೇಪಣೆಗಳನ್ನು ಅಗತ್ಯ ಕಾರಣ ಸಹಿತ ನೀಡಬಹುದಾಗಿದೆ. ಆಕ್ಷೇಪಣೆಗಳನ್ನು ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿ.ವಿ.ಗೋಪುರ, ಬೆಂಗಳೂರು ಇವರಿಗೆ ಸಲ್ಲಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News