×
Ad

ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ನಿಂದ ಸಿದ್ಧತೆ, ಇಂದು ಕನಕಪುರದಲ್ಲಿ ಸಭೆ

Update: 2022-01-08 10:38 IST

ಬೆಂಗಳೂರು, ಜ. 8: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ನೇತೃತ್ವದಲ್ಲಿ ನಾಳೆ(ಜ.9)ಯಿಂದ ಕನಕಪುರ ತಾಲೂಕಿನ 'ಸಂಗಮ' ದಿಂದ ಬೆಂಗಳೂರಿನ ವರೆಗೆ ನಡೆಸಲು ಉದ್ದೇಶಿಸಿರುವ 'ನೀರಿಗಾಗಿ ನಡಿಗೆ' ಪಾದಯಾತ್ರೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

 ರವಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಗೆ ಕಾವೇರಿ, ಅರ್ಕಾವತಿ ಹಾಗೂ ವೃಷಾಭಾವತಿ ನದಿಗಳು ಸೇರುವ 'ಸಂಗಮ'ದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.
 
ನಾಳೆಯಿಂದ ಜ.19ರ ವರೆಗೆ ನಡೆಯಲಿರುವ ಪಾದಯಾತ್ರೆ ಕನಕಪುರದ ಸಂಗಮದಿಂದ ಕನಕಪುರ, ರಾಮನಗರ, ಬಿಡದಿ ಹಾಗೂ ಕೆಂಗೇರಿ ಮಾರ್ಗವಾಗಿ ಬೆಂಗಳೂರು ತಲುಪಲಿದೆ.

ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕು ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಿರ್ಬಂಧ ಹೇರಿದ್ದು, ಈ ಆತಂಕದ ನಡುವೆಯೇ ಪಾದಯಾತ್ರೆ ಆರಂಭಗೊಳ್ಳಲಿದ್ದು, ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಈಗಾಗಲೇ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾದಯಾತ್ರೆ ಯಶಸ್ವಿಯಾಗಿ ನಡೆಸಲು ನಡಿಗೆ ಮಾರ್ಗದಲ್ಲಿ ಅಗತ್ಯ ಸಿದ್ದತೆ ಮಾಡಿಕೊಂಡಿದ್ದು, ಯಾತ್ರೆಗೆ ಆನ್ ಲೈನ್ ಮೂಲಕ ಒಟ್ಟು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಮಧ್ಯಾಹ್ನ ಸಭೆ: 'ನಮ್ಮ ನೀರು ನಮ್ಮ ಹಕ್ಕು' ಘೋಷಣೆಯೊಂದಿಗೆ 'ಮೇಕೆದಾಟು ಅಣೆಕಟ್ಟು ಯೋಜನೆ' ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಕೈಗೊಂಡಿರುವ ಪಾದಯಾತ್ರೆ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿಂದು ಮಧ್ಯಾಹ್ನ ಸಭೆ ನಡೆಯಲಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕನಕಪುರ ನಿವಾಸದಲ್ಲಿ ಕೈ ಶಾಸಕರು ಹಾಗೂ ಮುಖಂಡರ ಸಭೆ ನಡೆಯಲಿದೆ. ರಾಜ್ಯ ಸರಕಾರ ಕೋವಿಡ್ ನಿರ್ಬಂಧ ಹೇರಿದ್ದು ಈ ನಡುವೆ ನೀರಿಗಾಗಿ ನಡಿಗೆಯನ್ಮು ಯಶಸ್ವಿಯಾಗಿ ನಡೆಸುವ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

ಪಾದಯಾತ್ರೆ ಹಿನ್ನೆಲೆಯಲ್ಲಿ ಭರದ ಸಿದ್ದತೆ ನಡೆದಿದ್ದು ಯಾತ್ರೆ ಮಾರ್ಗದಲ್ಲಿ 'ನಮ್ಮ ನೀರು ನಮ್ಮ ಹಕ್ಕು' ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನಮ್ಮ ಹಕ್ಕೊತ್ತಾಯ ಘೋಷಣೆಯ ಗೋಡೆ ಬರಹ, ಪ್ಲೆಕ್ಸ್,, ಬ್ಯಾನರ್ ಗಳು ಮಾರ್ಗದೆಲ್ಲೆಡೆ ರಾರಾಜಿಸುತ್ತಿದ್ದು, ಗ್ರಾಮಗಳಲ್ಲಿ ಪಾದಯಾತ್ರಿಗಳ ಉಪಹಾರ, ಊಟ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಜಿಲ್ಲಾಧಿಕಾರಿ ನೋಟಿಸ್

ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕು ಭೀತಿ ಹಿನ್ನೆಲೆಯಲ್ಲಿ ನಾಳೆ ನಡೆಸಲು ಉದ್ದೇಶಿರುವ ಪಾದಯಾತ್ರೆ ವೇಳೆ ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರಾಮನಗರ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಶಿವರಾಜ್ ಕುಮಾರ್ ಗೆ ಆಹ್ವಾನ

ಮೇಕೆದಾಟು ಪಾದಯಾತ್ರೆಗೆ ಚಿತ್ರನಟ ಡಾ.ಶಿವರಾಜ್ ಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ನೀಡಿದ್ದು, ಅವರು ನಡಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News