ಮೊಮ್ಮಗಳ ಕಿಕ್ ಬಾಕ್ಸಿಂಗ್‍ ಸ್ಪರ್ಧೆಗೆ ಬೆನ್ನೆಲುಬಾಗಿ ನಿಂತ ತೃತೀಯಲಿಂಗಿ

Update: 2022-01-08 05:35 GMT

ಮೈಸೂರು: ನಿಂದನೆ ನೋವು, ನಿರ್ಲಕ್ಷ್ಯತೆಯನ್ನು ಮೆಟ್ಟಿನಿಂತು ತೃತೀಯ ಲಿಂಗಿಯೊಬ್ಬರು ತನ್ನ ಮೊಮ್ಮಗಳನ್ನು ರಾಷ್ಟ್ರೀಯ ಕಿಕ್ಸ್ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಗೆಲ್ಲುವುವಂತೆ ಮಾಡುವ ಮೂಲಕ ಸಮಾಜದಲ್ಲಿನ ಎಲ್ಲರೂ ನಮ್ಮನ್ನು ಗೌರವದಿಂದ ಕಾಣುವಂತೆ ಮನವಿ ಮಾಡಿದ್ದಾರೆ.

ಮೈಸೂರು ನಗರದ ತೃತೀಯ ಲಿಂಗಿ ಅಕ್ರಂ ಪಾಷಾ ಅಲಿಯಾಸ್ ಶಭಾನ ತನ್ನ 15 ವರ್ಷದ ಮೊಮ್ಮಗಳು  ಬಿಬಿ ಫಾತಿಮಾ ಎಸ್. ಅವರನ್ನು ಡಿ.27 ರಿಂದ 30 ರವರೆಗೆ ಮಹರಾಷ್ಟ್ರದ ಪೂಣೆಯಲ್ಲಿ ನಡೆದ ವಾಕೋ ಇಂಡಿಯಾ ನ್ಯಾಷನಲ್ ಕಿಕ್ ಬಾಕ್ಸಿಂಗ್-2021 ಸ್ಪರ್ಧೆಯಲ್ಲಿ ಚಿನ್ನದ ಪದಕ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದಾರೆ.

ನನ್ನ ಮೊಮ್ಮಗಳು ಅಂತರ್ ರಾಷ್ಟ್ರೀಯ ಮತ್ತು ಒಲಿಂಪಿಕ್ಸ್ ನಲ್ಲೂ ಭಾಗವಹಿಸಲು ಪಣತೊಟ್ಟಿದ್ದು, ಮೊಮ್ಮಗಳ ಸಾಧನೆಗೆ ಆರ್ಥಿಕ ನೆರವು ನೀಡುವಂತೆ ಅಕ್ರಂ ಪಾಷಾ ಅಲಿಯಾಸ್ ಶಭಾನ ಮನವಿ ಮಾಡಿದ್ದಾರೆ.

ನಾನು  ಸಮಾಜದಲ್ಲಿ ತಪ್ಪು ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ, ತೃತೀಯ ಲಿಂಗಿ ಆದಾಗಲಿನಿಂದ ನಾನು ಕಷ್ಟಪಟ್ಟು ಅಲ್ಲಿ ಇಲ್ಲಿ ಭಿಕ್ಷೆ ಬೇಡಿ ನನ್ನ ಮಗಳು ಸೇರಿದಂತೆ ಅವರ ನಾಲ್ವರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದೇನೆ.

ನನಗೆ ಇಬ್ಬರು ಮಕ್ಕಳು ಒಬ್ಬ ಗಂಡು ಮತ್ತೊಬ್ಬಳು ಹೆಣ್ಣು, ನನ್ನ ಮಗ ನನ್ನಿಂದ ದೂರ ಆಗಿ ಬೇರೆ ಇದ್ದಾನೆ. ನನ್ನ ಮಗಳನ್ನು ಮದುವೆ ಮಾಡಿದ್ದೆ. ನನ್ನ ಅಳಿಯ ನಾಲ್ಕು ಹೆಣ್ಣು ಮಕ್ಕಳಾಯಿತು ಎಂದು ನನ್ನ ಮಗಳನ್ನು ಬಿಟ್ಟು ಹೊರಟು ಹೋದ, ಇದಾದ ನಂತರ ನನ್ನ ಮಗಳೂ ನೊಂದು ಆತ್ಮಹತ್ಯೆಗೆ ಮುಂದಾಗಿದ್ದಳು. ಆದರೆ ನಾನು ಅವಳಿಗೆ ಧೈರ್ಯ ತುಂಬಿ ಬುದುಕುವಂತೆ ಮಾಡಿ ನನ್ನ ಜೊತೆಗೆ ಇಟ್ಟುಕೊಂಡು ಸಾಕುತ್ತಿದ್ದೇನೆ ಎಂದು ಹೇಳಿದರು.

ನನ್ನ ಮೊಮ್ಮಗಳು ಎಸ್.ಫಾತಿಮಾ 9 ನೇ ತರಗತಿ ಓದುತ್ತಿದ್ದು, ಅವಳನ್ನು ಕಷ್ಟಪಟ್ಟು  ಅವರಿವರ ನೆರವು ಪಡೆದು ಕಿಕ್ ಬಾಕ್ಸಿಂಗ್ ನಲ್ಲಿ ರಾಷ್ಟ್ರೀಯ ಮಟ್ಟದ ವರೆಗೆ ಕರೆದುಕೊಂಡು ಹೋಗಿದ್ದೇನೆ. ಆದರೂ ಸಮಾಜ ನನ್ನನ್ನು ಕೆಟ್ಟ ದೃಷ್ಟಿಯಿಂದಲೇ ನೋಡುತ್ತಿದೆ. ನಾನು ತಪ್ಪು ಮಾಡಿಲ್ಲ, ನನ್ನ ಮೊಮ್ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ಅವಳನ್ನು ದಾರಿ ತಪ್ಪಿಸಲು ಕರೆದುಕೊಂಡು ಹೋಗುತ್ತಿದ್ದಾನೆ ಎಂದು ನಿಂದಿಸುತ್ತಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ನನಗೆ ಏನಾದರೂ ಅನ್ನಲಿ ಆದರೆ ನನ್ನ ಮೊಮ್ಮಗಳ ಬಗ್ಗೆ ಯಾರೂ ಮಾತನಾಡಬಾರದು. ಅವಳು ಅಂತರಾಷ್ಟೀಯ ಮಟ್ಟದಲ್ಲಿ ಮತ್ತು ಒಲಂಪಿಕ್ಸ್ ನಲ್ಲಿ ಚಿನ್ನದ ಪದಕೆ ಗೆಲ್ಲುವಂತೆ ಮಾಡೇ ಮಾಡುತ್ತೇನೆ ಎಂಬ ಆತ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ನನ್ನ ಮೊಮ್ಮಗಳ ಏಳಿಗೆಗೆ ಹಲವಾರು ಮಂದಿ ಸಹಕಾರ ನೀಡಿದ್ದಾರೆ. ಅವಳ ಮುಂದಿನ ಸಾಧನೆಗೆ ಆರ್ಥಿಕ ನೆರವಿನ ಅಗತ್ಯವಿದೆ. ಹಾಗಾಗಿ ನಮಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

''ನಮ್ಮ ತಾತಾ ತೃತೀಯ ಲಿಂಗಿ, ಆದರೂ ಅವರು ನನ್ನ ಮತ್ತು ನನ್ನ ಅಮ್ಮ ಮೂವರು ಸಹೋದರಿಯರನ್ನು ಸಾಕುತ್ತಿದ್ದಾರೆ. ನಾನು ಈ ಮಟ್ಟಕ್ಕೆ ಬರಲು ನಮ್ಮ ತಾತಾ ಅಕ್ರಂ ಪಾಷಾ ಕಾರಣ, ಮುಂದೆ ನಾನು ಅಂತರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಿ ಒಲಂಪಿಕ್ಸ್ ನಲ್ಲಿ ಗೆಲುವು ಸಾಧಿಸಿ ದೇಶಕ್ಕೆ ಕೀರ್ತಿ ತರುವ ಮೂಲಕ ನಮ್ಮ ತಾತನನ್ನು ನಿರ್ಲಕ್ಷ್ಯದಿಂದ ಕಾಣುವವರ ಮುಂದೆ ಸಮನಾಗಿ ನಿಲ್ಲಿಸುತ್ತೇನೆ''.

 -ಬಿಬಿ ಫಾತಿಮಾ ಎಸ್. , ತೃತೀಯ ಲಿಂಗಿ ಅಕ್ರಂ ಪಾಷಾ ಮೊಮ್ಮಗಳು.

''ತೃತೀಯ ಲಿಂಗಿಗಳು ಎಂದು ನಮ್ಮನ್ನು ನಿರ್ಲಕ್ಷ್ಯದಿಂದ ಕಾಣುವುದು ಬೇಡ, ಸರ್ಕಾರ ನಮಗೂ ಎಲ್ಲರಂತೆ ಹಲವು ಯೋಜನೆಗಳನ್ನು ಕೊಟ್ಟರೆ ನಾವೇಕೆ ಅಲ್ಲಿ ಇಲ್ಲಿ ಭಿಕ್ಷೆ ಬೇಡಬೇಕು? ದಯಮಾಡಿ ಸಮಾಜ ನಮ್ಮನ್ನು ಅವರಂತೆಯೇ ಎಂದು ಭಾವಿಸಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕು''. 

-ಪ್ರಣತಿ ಪ್ರಕಾಶ್,   ತೃತೀಯ ಲಿಂಗಿ ಸಂಘದ ಕಾರ್ಯದರ್ಶಿ

Writer - ನೇರಳೆ ಸತೀಶ್‍ಕುಮಾರ್

contributor

Editor - ನೇರಳೆ ಸತೀಶ್‍ಕುಮಾರ್

contributor

Similar News