ಪಾದಯಾತ್ರೆ: 'ನೀವು ಇಬ್ಬರೇ ಯಾಕೆ ಹೋಗಿ ಸಾಯ್ತಿರಿ?'; ಸಿದ್ದರಾಮಯ್ಯ, ಡಿಕೆಶಿಗೆ ಸಚಿವ ಈಶ್ವರಪ್ಪ ತಿರುಗೇಟು

Update: 2022-01-08 10:49 GMT

ಶಿವಮೊಗ್ಗ, ಜ.08: ''ಅಪ್ಪಾ ಸಾಯಬೇಡ್ರಿ ಅಂತೀವಿ, ಇಲ್ಲ ನಾವು ಸಾಯೋರೇ ಅಂತಾ ಚಂಡಿ ಹಠ ಹಿಡಿದ್ರೆ ಏನು ಮಾಡೋಣ..? ಇಬ್ಬರೇ ಯಾಕ್ ಹೋಗಿ ಸಾಯ್ತಿರಿ? ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರಿಗೆ ಪ್ರಾರ್ಥನೆ ಮಾಡುತ್ತೇನೆ'' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನೀವು ಇಬ್ಬರೇ ಪಾದಯಾತ್ರೆ ಹೋಗುತ್ತೇವೆ ಎನ್ನುತ್ತಿದ್ದೀರಿ, ಆದರೆ ನಿಮ್ಮ ಕಾರ್ಯಕರ್ತರು ಬಿಡುವುದಿಲ್ಲ. ನಾಳೆ ತಾ.ಪಂ., ಜಿ.ಪಂ. ಅಸ್ಲೆಂಬಿ ಚುನಾವಣೆಯಿದೆ. ಇವರ ಎದುರಿಗೆ ಶೋ ಮಾಡಬೇಕೆಂದು ತುಂಬಾ ಜನ ಬರುತ್ತಾರೆ. ಸುಮ್ಮಸುಮ್ಮನೆ ನೀವು ಏಕೆ ಸಾಯುತ್ತೀರಿ, ಅವರನ್ನು ಏಕೆ ಸಾಯಿಸುತ್ತೀರಾ'' ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಗೆ ಕುಟುಕಿದರು.

''ನಾವು- ನೀವು ಒಟ್ಟಿಗೆ ಸಂತೋಷವಾಗಿ ಜೀವನ ಮಾಡೋಣ ಎಂದು ಪ್ರಾರ್ಥನೆ ಮಾಡುತ್ತೇನೆ. ರಾಜಕಾರಣ ಮಾಡುವ ಸಲುವಾಗಿ ಪಾದಯಾತ್ರೆ ಮಾಡಲೇಬೇಕೆಂದು ಹಠ ಹಿಡಿದರೆ ನನ್ನ ಅಭ್ಯಂತರವೇನಿಲ್ಲ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಹೋರಾಟ ಮಾಡುವ ಅವಕಾಶ ಇದೆ. ರಾಜಕಾರಣಕ್ಕೋಸ್ಕರ ಕಾಂಗ್ರೆಸ್ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯದ ಜನ ಯೋಚನೆ ಮಾಡ್ತಿದ್ದಾರೆ'' ಎಂದರು.

''ಅಧಿಕಾರದಲ್ಲಿ ಇದ್ದಾಗ ಕೃಷ್ಣಾ, ಕಾವೇರಿ, ಮೇಕೆದಾಟು ಮರೆತು ಹೋಗಿತ್ತು. ಕೇಂದ್ರದಲ್ಲಿ ಸಾಕಷ್ಟು ವರ್ಷ ಅಧಿಕಾರದಲ್ಲಿ ಇದ್ದರೂ ಕಾಂಗ್ರೆಸ್ ಏನೂ ಮಾಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ನಿಮಗೆ ಎಲ್ಲ ನೆನಪಾಗುತ್ತದೆ. ಈ ಹೋರಾಟ ಕೋವಿಡ್ ಮುಗಿದ ಮೇಲೆ ಮಾಡಿ, ಮೊದಲು ನೀವು ಬದುಕಿ. ರಾಜ್ಯದಲ್ಲಿ ವಿರೋಧ ಪಕ್ಷ ಇರಬೇಕು. ಇಲ್ಲದಿದ್ದರೆ ಮುಂದಿನ ಚುನಾವನೆಯಲ್ಲಿ ವಿರೋಧ ಪಕ್ಷವೇ ಇಲ್ಲದಂತೆ ಆಗುತ್ತದೆ'' ಎಂದು ಛೇಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News