×
Ad

ಕಾಫಿ ಬೆಳೆಗಾರರ 10 ಎಚ್‍ಪಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಪೂರೈಸಲು ಇಂಧನ ಸಚಿವರಿಗೆ ಮನವಿ

Update: 2022-01-08 19:07 IST

ಚಿಕ್ಕಮಗಳೂರು, ಜ.8: ಕಳೆದ ಬಜೆಟ್‍ನಲ್ಲಿ ಘೋಷಿಸಿದಂತೆ ಕೃಷಿ ಜಮೀನುಗಳಲ್ಲಿ 10ಎಚ್‍ಪಿ ಪಂಪ್‍ಸೆಟ್‍ವರೆಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಸಣ್ಣ ಮತ್ತು ಮಧ್ಯಮ ವರ್ಗದ ಕಾಫಿ ಬೆಳೆಗಾರರಿಗೂ ವಿಸ್ತರಿಸುವಂತೆ ಕೋರಿ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ ಅವರ ನೇತೃತ್ವದ ಕಾಫಿ ಬೆಳೆಗಾರರ ನಿಯೋಗ ಇಂಧನ ಸಚಿವ ವಿ.ಸುನೀಲ್‍ಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಬಗ್ಗೆ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ ಮಾತನಾಡಿ, ರಾಜ್ಯ ಸರಕಾರ ಕಳೆದ 2020-21ನೇ ಬಜೆಟ್‍ನಲ್ಲಿ 10ಎಚ್‍ಪಿ ಪಂಪ್‍ಸೆಟ್ ಬಳಕೆ ಮಾಡುವ ರೈತರಿಗೆ ಉಚಿತ ವಿದ್ಯುತ್ ಸಂಪರ್ಕ ಘೋಷಣೆ ಮಾಡಿದೆ. ಆದರೆ ಇದರಲ್ಲಿ ಕಾಫಿ ಬೆಳೆಗಾರರನ್ನು ಮಾತ್ರ ಹೊರಗಿಟ್ಟಿದೆ. ಅಂತಹ ನೀತಿಯನ್ನು ಅನುಸರಿದೆ ಅದನ್ನು 10ಎಚ್‍ಪಿ ಪಂಪ್‍ಸೆಟ್‍ವರೆಗೆ ಬಳಕೆ ಮಾಡುವ ಸಣ್ಣ ಮತ್ತು ಮಧ್ಯಮ ವರ್ಗದ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್‍ನ್ನು ವಿಸ್ತರಣೆ ಮಾಡಬೇಕು. ಮುಖ್ಯವಾಗಿ ಬೆಳೆಗಾರರು ವರ್ಷದ ಮಾರ್ಚ್ ಮತ್ತು ಎಪ್ರಿಲ್ ಮಾಸದಲ್ಲಿ ಮಾತ್ರವೇ ವಿದ್ಯುತ್ ಬಳಕೆ ಮಾಡಲಿದ್ದು, ಬಾಕಿ ತಿಂಗಳಲ್ಲಿ ಅದರ ಅಗತ್ಯವಿರುವುದಿಲ್ಲ. ಇದನ್ನು ಮನಗಂಡು ಶೀಘ್ರವಾಗಿ ಅನುಷ್ಠಾನಕ್ಕೆ ತರಬೇಕು. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಸೂಚಿಸುವಂತೆ ಕೋರಿಕೊಂಡರು

ಚಿಕ್ಕಮಗಳೂರು, ಕೊಡಗು, ಹಾಸನ ಕಡೆಗಳಲ್ಲಿ ಅತಿ ಹೆಚ್ಚಿನ ಸಣ್ಣ ಮತ್ತು ಮಧ್ಯಮ ವರ್ಗದ ಕಾಫಿ ಬೆಳೆಗಾರರಿದ್ದು, ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಅಕಾಲಿಕ ಮಳೆ, ಅತಿವೃಷ್ಟಿ ಪರಿಣಾಮದಿಂದಾಗಿ  ಬೆಳೆಗಾರರು ತೀವ್ರತರನಾದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಈ ಹಿಂದೆ ರಾಜ್ಯ ಸರಕಾರ ಘೋಷಣೆ ಮಾಡಿದಂತೆ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಅಳವಡಿಕೆ ಅನುಷ್ಠಾನದ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದ ಅವರು, ಈಗಾಗಲೇ ಕಾಫಿ ಮಂಡಳಿ ತೋಟಗಾರಿಕೆ ಇಲಾಖೆ ಹಾಗೂ ಇಂಧನ ಇಲಾಖೆಗೆ ಪತ್ರ ಮುಖೇನ ಮನವಿ ಮಾಡಲಾಗಿದೆ. ಜತೆಗೆ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರ ಗಮನಕ್ಕೂ ಬೆಳೆಗಾರರ ಸಮಸ್ಯೆಗಳ ಕುರಿತು ಮನವರಿಕೆ ಮಾಡಲಾಗಿದೆ. ಈ ಸಂಬಂಧವಾಗಿ ರಾಜ್ಯ ಸರ್ಕಾರ 10 ಹೆಚ್.ಪಿ ಮೋಟಾರ್ ಪಂಪ್ ಹೊಂದಿರುವ ಸಣ್ಣ ಹಾಗೂ ಮಧ್ಯಮ ವರ್ಗದ ಕಾಫಿ ಬೆಳೆಗಾರರಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಚಿಕ್ಕಮಗಳೂರು ತಾಲೂಕಿನ ಅರಿಶಿಣಗುಪ್ಪೆಯಲ್ಲಿ ಬೆಳೆಗಾರರು, ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಉಪ ಘಟಕ ಸ್ಥಾಪನೆಗೆ ಸರಕಾರದಿಂದ ಅನುಮೋದನೆ ದೊರಕಿದ್ದು, ಟೆಂಡರ್ ಪ್ರಕ್ರಿಯೆ ಕೂಡ ನಡೆದಿದೆ. ಆದರೆ ಕಾಮಗಾರಿ ಇನ್ನೂ ವಿಳಂಬವಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿದ ಮುಖಂಡರು, ಜಿಲ್ಲೆಯ ಅರಿಶಿಣಗುಪ್ಪೆಯಲ್ಲಿ ನಿರ್ಮಾಣಗೊಳ್ಳುತಿರುವ ವಿದ್ಯುತ್ ಉಪ ಘಟಕ ನಿರ್ಮಾಣದಿಂದಾಗಿ ಶಾಂತವೇರಿ-ಕಡೂರು ಮೂಲದವರೆಗೂ ವಿಸ್ತರಣೆಯಾಗಿ ಬಹುತೇಕ ರೈತರು, ಬೆಳೆಗಾರರಿಗೆ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಆದಷ್ಟು ಶೀಘ್ರದಲ್ಲಿ ವಿದ್ಯುತ್ ಘಟಕ ನಿರ್ಮಾಣ ಕಾಮಗಾರಿಗೆ ಒತ್ತು ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಫಿ ಮಂಡಳಿ ಉಪಾಧ್ಯಕ್ಷ ಮಹಾಬಲರಾವ್, ಸದಸ್ಯರಾದ ಜಾನ್, ಚೆಂದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News