ಕುಶಾಲನಗರ: ಎಬಿವಿಪಿ ವಿದ್ಯಾರ್ಥಿಗಳಿಂದ ಯುವಕನ ಮೇಲೆ ಹಲ್ಲೆ ಆರೋಪ; ಪ್ರಕರಣ ದಾಖಲು

Update: 2022-01-08 15:09 GMT

ಕುಶಾಲನಗರ, ಜ8: ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಯೋರ್ವನ ಮೇಲೆ ಎಬಿವಿಪಿ ವಿದ್ಯಾರ್ಥಿಗಳಿಂದ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ. ಘಟಕೆ ಸಂಬಂಧ ಕುಶಾಲನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹಮ್ಮಿಗೆ ಗ್ರಾಮದ ನಿವಾಸಿ ತೌಸೀಫ್ (18) ಹಲ್ಲೆಗೊಳಗಾದ ವಿದ್ಯಾರ್ಥಿ. ತೌಸೀಫ್   ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಪಾಲಿಟೆಕ್ನಿಕ್ ಕಾಲೇಜಿನ ಆರು ವಿದ್ಯಾರ್ಥಿಗಳ ಮೇಲೆ ಕುಶಾಲನಗರ ಪಟ್ಟಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಘಟನೆ ಹಿನ್ನಲೆ: ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೆಲವು ಹಿರಿಯ ವಿದ್ಯಾರ್ಥಿಗಳು ತೌಸೀಫ್ ಎಂಬ ವಿದ್ಯಾರ್ಥಿಯ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ. 

ತೌಸೀಫ್ ಘಟನೆ ಬಗ್ಗೆ ಪೋಲೀಸ್ ತುರ್ತು ಸೇವೆಯಾದ 112 ಗೆ ಕರೆ ಮಾಡಿ ದೂರು ನೀಡಿದ್ದಾರೆ. ಪೋಲೀಸರು ಕಾಲೇಜಿಗೆ ಘಟನೆ ಬಗ್ಗೆ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.  ಪ್ರಾಂಶುಪಾಲರ ನೇತೃತ್ವದಲ್ಲಿ ದಬ್ಬಾಳಿಕೆ ನಡೆಸಿದವರಿಂದ ಹಿಂಬರದ ಬರೆಸಿ ಎಚ್ಚರಿಕೆ ನೀಡಿದ್ದರು. ಇದೇ ವಿಷಯವನ್ನು ಕೆಣಕಿ ಜಗಳ ತೆಗೆದ ವಿದ್ಯಾರ್ಥಿಗಳು, ತೌಸೀಫ್ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಪಟ್ಟಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತೌಸೀಫ್ ವಿರುದ್ಧ ಪ್ರತಿದೂರು: ಕುಶಾಲನಗರ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಪ್ರಫುಲ್ ಎಂಬವರು ತೌಸೀಫ್ ಎಂಬ ವಿದ್ಯಾರ್ಥಿ ವಿರುದ್ಧ ಪ್ರತಿದೂರು ನೀಡಿದ್ದಾರೆ.‌ 

ಎಸ್ ಡಿಪಿಐ ಖಂಡನೆ: ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜಿನ ಮುಸ್ಲಿಂ ಯುವಕನ ಮೇಲೆ ಕೆಲವು ಎಬಿವಿಪಿ ವಿದ್ಯಾರ್ಥಿಗಳು, ಹಲ್ಲೆ ನಡೆಸಿದ್ದಾರೆ. ತೌಸೀಫ್ ಓರ್ವ ಮುಸ್ಲಿಂ ಎಂಬ ಕಾರಣಕ್ಕಾಗಿ ಕಾಲೇಜಿನ ಕೆಲ ಪುಂಡ ಯುವಕರು ನಿರಂತರವಾಗಿ ಹಲ್ಲೆ ನಡೆಸುತ್ತಿದ್ದರೂ, ಪ್ರಾಂಶುಪಾಲರು ಮೌನವಹಿಸಿರುವುದು ಖಂಡನೀಯ. ಪ್ರಾಂಶುಪಾಲರಿ ಮಧ್ಯಪ್ರವೇಶಿಸಿ ಹಲ್ಲೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿತ್ತು. ಆದರೆ ಪ್ರಾಂಶುಪಾಲರು ಘಟನೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಸರಿಯಲ್ಲ. ವಿದ್ಯಾರ್ಥಿಯ ಪ್ರಾಣಕ್ಕೆ ತೊಂದರೆಯಾಗಿದ್ದರೇ ಯಾರು ಹೊಣೆಯಾಗುತ್ತಿದ್ದರು ಎಂದು ಪ್ರಶ್ನಿಸಿರುವ ಎಸ್ ಡಿಪಿಐ, ಘಟನೆಯನ್ನು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News