ರಾಜಕೀಯಕ್ಕಾಗಿ ಹೋರಾಟವಲ್ಲ, ನೀರಿಗಾಗಿ ನಮ್ಮ ನಡಿಗೆ: ಸಿದ್ದರಾಮಯ್ಯ

Update: 2022-01-08 15:40 GMT

ಬೆಂಗಳೂರು, ಜ. 8: ಮುಂದಿನ ಐವತ್ತು ವರ್ಷಗಳ ಕಾಲ ರಾಜ್ಯದ ಎರಡೂವರೆ ಕೋಟಿ ಅಧಿಕ ಜನರಿಗೆ ನೀರು ಒದಗಿಸುವ 'ಮೇಕೆದಾಟು ಯೋಜನೆ' ಜಾರಿಗೆ ಆಗ್ರಹಿಸಿ ನೀರಿಗಾಗಿ ನಡಿಗೆ ಪಾದಯಾತ್ರೆ ಯಾವುದೆ ಕಾರಣಕ್ಕೂ ನಿಲ್ಲದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಕನಕಪುರದಲ್ಲಿನ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರ ಏನೇ ಮಾಡಿದರೂ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು.

ಈ ನಡಿಗೆಯನ್ನು ನಾವು ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಮಾಡುತ್ತಿಲ್ಲ. ನೀರಿಗಾಗಿ, ರಾಜ್ಯದ ಒಳಿತಿಗಾಗಿ ನಮ್ಮ ಹೋರಾಟ. ರಾಜ್ಯದ ಜನ ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ಕೋವಿಡ್ ಮಾರ್ಗಸೂಚಿ ಪಾಲಿಸಿ, ಅಂತರ ಕಾಪಾಡುವುದು, ಮಾಸ್ಕ್ ಧರಿಸಿ ಯಾತ್ರೆ ಮಾಡುತ್ತೇವೆ. ನೂರು ಜನ ವೈದ್ಯರು, ಒಂದುವರೆ ಸಾವಿರ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು.

ನಾಳೆ ಬೆಳಗ್ಗೆ 8:30ರಿಂದ ನೀರಿಗಾಗಿ ನಡಿಗೆ ಆರಂಭವಾಗಲಿದೆ. ದಾರಿ ಮಧ್ಯೆ ನಿಮ್ಮನ್ನು ತಡೆಯುವ ಪ್ರಯತ್ನ ನಡೆಯಬಹುದು. ಆದರೆ ತಡೆ ಹಾಕಲು ಅವಕಾಶ ಇಲ್ಲ ಎಂದರು.

ಇಂದು ಎರಡು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟವಾಗಿದೆ. ಜಾಹೀರಾತು ಕೊಟ್ಟವರು ಯಾರು ಎಂಬ ಹೆಸರಿಲ್ಲ. ಪಾದಯಾತ್ರೆ ರಾಜಕೀಯಕ್ಕಾಗಿ ಆಯೋಜನೆ ಮಾಡಿಲ್ಲ. ಮೂರು ತಿಂಗಳ ಹಿಂದೆಯೇ ಹಿರಿಯ ನಾಯಕರ ಜೊತೆ ಚರ್ಚಿಸಿ ನಿರ್ಧಾರ ಮಾಡಲಾಗಿತ್ತು ಎಂದರು.

ರಾಜ್ಯ ಸರಕಾರ ವಿಳಂಬ ಧೊರಣೆ ಅನುಸರಿಸುತ್ತಿದೆ. ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾಗಿದೆ. ಆದರೂ ಯೋಜನೆ ಜಾರಿ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಕೇಂದ್ರ ಅರಣ್ಯ ಇಲಾಖೆ ಅನುಮತಿ ಮಾತ್ರ ಬಾಕಿ ಇದೆ. ಅದು ಒಂದು ವಾರದಲ್ಲಿ ಪಡೆದುಕೊಳ್ಳಬಹುದು, ಆದರೆ ಸರಕಾರ ಯಾವ ಪ್ರಯತ್ನವನ್ನು ಮಾಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಯೋಜನೆ ರೂಪಗೊಂಡಿತ್ತು. ಯಾವ ನ್ಯಾಯಾಲಯದಲ್ಲೂ ಯೋಜನೆಗೆ ತಡೆಯಾಜ್ಞೆ ಇಲ್ಲ. ಮಳೆ ನೀರು ಸಂಗ್ರಹಿಸುವ ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನ್ಯಾಯವಾಗುವುದಿಲ್ಲ. ಬೆಂಗಳೂರಿನ ಶೇ.30 ಪ್ರದೇಶಕ್ಕೆ ನೀರು ಪೂರೈಕೆಯಾಗಲಿದೆ. ಮುಂದಿನ ಐವತ್ತು ವರ್ಷ ನೀರಿನ ಸಮಸ್ಯೆ ಇರುವುದಿಲ್ಲ ಎಂದರು.

ರಾಜ್ಯ ಸರಕಾರ ರಾಮನಗರ ಜಿಲ್ಲೆಯಲ್ಲಿ ಮಾತ್ರ ನಿಷೇಧಾಜ್ಞೆ ಜಾರಿಗೊಳಿಸಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪಾದಯಾತ್ರೆಗೆ ಅಡ್ಡಿಪಡಿಸುತ್ತಿದ್ದೆ. ನಾವು ಕಾನೂನನ್ನು ಗೌರವಿಸಿ ಪಾದಯಾತ್ರೆ ಮಾಡುತ್ತೇವೆ. ಇದರ ಹಿಂದೆ ಜನಪರ ಕಾಳಜಿ ಇದ್ದು, ಯಾವುದೇ ರಾಜಕಾರಣ ಇಲ್ಲ. ಬಿಜೆಪಿ ಷಡ್ಯಂತ್ರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ.

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

ರಾಮನಗರ ಜಿಲ್ಲೆಯಲ್ಲಿ ಒಂದು ಐಸಿಯು ರೋಗಿಗಳಿಲ್ಲ. ಪಾದಯಾತ್ರೆ ನಿಲ್ಲಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೋವಿಡ್ ಸಂಖ್ಯೆ ಹೆಚ್ಚು ತೋರಿಸಿದ್ದಾರೆ. ಪಾದಯಾತ್ರೆ ನಿಲ್ಲಿಸಲು ಸರಕಾರ ಎಲ್ಲ ಪ್ರಯತ್ನ ನಡೆಸಿದೆ. ಸುಳ್ಳು ಪ್ರಚಾರ ನಡೆಸಿದ್ದು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಲಾಕ್ ಡೌನ್, ಕಫ್ರ್ಯೂ ಜಾರಿ ಮಾಡಿದ್ದಾರೆ. ಸರಕಾರ ಏನೇ ಮಾಡಿದರೂ ಪಾದಯಾತ್ರೆ ನಿಲ್ಲದು'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News