ಕನಕಪುರ: ಕಾವೇರಿ ಸಂಗಮದಿಂದ ಮೇಕೆದಾಟು ಪಾದಯಾತ್ರೆ ಆರಂಭ
ಬೆಂಗಳೂರು, ಜ. 9: 'ನಮ್ಮ ನೀರು ನಮ್ಮ ಹಕ್ಕು' ಘೋಷಣೆಯೊಂದಿಗೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಐತಿಹಾಸಿಕ ಪಾದಯಾತ್ರೆಯ ವಿದ್ಯುಕ್ತವಾಗಿ ಆರಂಭವಾಗಿದೆ.
ರವಿವಾರ ಕನಕಪುರದ ಕಾವೇರಿ ಮತ್ತು ಅರ್ಕಾವತಿ ಸೇರುವ 'ಸಂಗಮ' ಸ್ಥಳದಲ್ಲಿನ ನದಿ ದಂಡೆಯಲ್ಲಿ ಹಾಕಿದ್ದ ವೇದಿಕೆ ಮೇಲೆ ತೆಂಗು, ಹಲಸು ಮತ್ತು ಮಾವಿನ ಗಿಡಕ್ಕೆ ನೀರು ಎರೆಯುವ ಮೂಲಕ ಮಠಾಧೀಶರು, ಕ್ರೈಸ್ತ ಧರ್ಮಗುರು ಚಾಲನೆ ನೀಡಿದರು. ಆ ಬಳಿಕ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಡಮರುಗ ಬಾರಿಸಿ, ಸರಕಾರ ಏನೇ ನಿರ್ಬಂಧ ಹೇರಿದರೂ ಮೇಕೆದಾಟು ಯೋಜನೆ ಜಾರಿಗಾಗಿ ಹಮ್ಮಿಕೊಂಡಿರುವ ನಮ್ಮ ಹೊರಾಟ ನಿಲ್ಲದು ಎಂದು ಹೇಳಿದರು.
ಬೆಳಗ್ಗೆ 5:30ರ ಸುಮಾರಿಗೆ ಸಂಗಮ ಸ್ಥಳದಲ್ಲೆ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ.ಶಿವಕುಮಾರ್ ಅವರು ಸಂಗಮದಲ್ಲಿ ಒಂದಷ್ಟು ದೂರ ತೆಪ್ಪದಲ್ಲಿ ಪ್ರಯಾಣ ಮಾಡಿ ತಾವೇ ಹುಟ್ಟು ಹಾಕಿ ಎಲ್ಲರ ಗಮನ ಸೆಳೆದರು.
ಆಕರ್ಷಕ ಹೆಜ್ಜೆ ಹಾಡು: ಜಾನಪದ ತಂಡಗಳಾದ ವೀರಗಾಸೆ, ನಂದಿಕೋಲು, ಪಟದ ಕುಣಿತ, ಯಕ್ಷಗಾನ, ಬೊಂಬೆ ಪ್ರದರ್ಶನ, ಡೊಳ್ಳು-ತಮಟೆ ವಾದ್ಯಗಳು ಪಾದಯಾತ್ರೆ ವಿಶೇಷ ಮೆರುಗು ತಂದಿದ್ದವು.
ಇದೇ ವೇಳೆ ಸಂಗೀತ ನಿರ್ದೇಶಕ ಸಾಧು ಕೋಕಿಲ ತಂಡದಿಂದ ಹಾಡಿದ 'ಹೆಜ್ಜೆ ಹಾಕುತ್ತೇವೆ ನಾವು ಹೆಜ್ಜೆ..ಹಾಕುತ್ತೇವೆ ಹೆಜ್ಜೆ.. ನಮ್ಮೊರ ನೀರಿಗಾಗಿ ಹೆಜ್ಜೆ ಹೆಜ್ಜೆ... ಕಾವೇರಿ ತಾಯಿಗಾಗಿ ಹೆಜ್ಜೆ..ನಮ್ಮ ನೀರಿಗಾಗಿ ಹೆಜ್ಜೆ.. ಹಾಡಿಗೆ ಪಕ್ಷದ ಕಾರ್ಯಕರ್ತರು ಚಪ್ಪಾಳೆ ತಟ್ಟಿ, ನೃತ್ಯ ಮಾಡಿದರು.