'ಕಾಂಗ್ರೆಸ್ ನಾಯಕರು ನದಿ ದಡದ ಮೇಲೆ ಕುಳಿತು ಕಿವಿ ಹಿಡಿದು ಕ್ಷಮೆಯಾಚಿಸಬೇಕು' ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-01-09 05:28 GMT
ಫೈಲ್ ಚಿತ್ರ- ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: 'ರಾಜ್ಯದಲ್ಲಿ ಕೋವಿಡ್ ಹಾಗೂ ಒಮೈಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರು ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಾರಾಂತ್ಯ ಕರ್ಫ್ಯೂ ವಿಧಿಸಿದ್ದು, ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುವುದು ಸರಿಯಲ್ಲ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. 

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಕಾಂಗ್ರೆಸ್ ನಾಯಕರು ಮಾಡಬೇಕಾಗಿರುವುದು ಪಾದಯಾತ್ರೆ ಅಲ್ಲ, ಕನಕಪುರದ  ಆ ನದಿ ದಡದ ಮೇಲೆ ಮಂಡಿಯೂರಿ ಕುಳಿತುಕೊಂಡು ತಮ್ಮ ಎರಡು ಕಿವಿಗಳನ್ನು ಹಿಡಿದುಕೊಂಡು ನಮಗೆ ಮತ ಹಾಕಿ ಅಧಿಕಾರ ಕೊಟ್ಟಿದ್ದರೂ ನಮಗೆ ಮೇಕೆ ದಾಟು ಯೋಜನೆ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ ಎಂದು ರಾಜ್ಯದ ಜನರ ಬಳಿ ಕ್ಷಮೆಯಾಚಿಸಬೇಕು'' ಎಂದು ಆಕ್ರೋಶ ವ್ಯಕ್ತಪಡಿಸಿದರು.  

ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದರೆ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ,  ಕ್ರಮ ಕೈಗೊಳ್ಳುವ ಬಗ್ಗೆ ಅಲ್ಲಿನ ಜಿಲ್ಲಾಡಳಿತಕ್ಕೆ ಬಿಟ್ಟಿದೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News