ಮೇಕೆದಾಟು: ಇದು ರಾಜಕೀಯ ಪ್ರೇರಿತ ಕಾಂಗ್ರೆಸ್ ಪಾದಯಾತ್ರೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Update: 2022-01-09 12:03 IST
ಬೆಂಗಳೂರು: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 5 ವರ್ಷ ಅಧಿಕಾರದಲ್ಲಿದ್ದರೂ ಮೇಕೆದಾಟು ಯೋಜನೆಗೆ ಡಿಪಿಆರ್ ಸಲ್ಲಿಸಲು ಅವರಿಂದಾಗಿಲ್ಲ, ಅವರಿಗೆ ಯಾವುದೇ ಬದ್ಧತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ನೀರಾವರಿ ಸಚಿವ ಗೋವಿಂದ ಕಾರಜೋಳ ಜೊತೆ ಸಭೆ ನಡೆಸಿದ ಬಳಿಕ ಸಿಎಂ ಬೊಮ್ಮಾಯಿ ಸುದ್ದಿಗಾರರ ಜೊತೆ ಮಾತನಾಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ ಶಿವಕುಮಾರ್ ಅವರು ನೀರಾವರಿ ಸಚಿವರಿದ್ದರು, ಆಗಲೂ ಡಿಪಿಆರ್ ಮಂಡಿಸಲಿಲ್ಲ. ಇಂದು ಚುನಾವಣೆಗಾಗಿ ರಾಜಕೀಯ ಪಾದಯಾತ್ರೆ ಮಾಡುತ್ತಿದ್ದಾರೆ. ತಾವು ಕೆಲಸ ಮಾಡಿಲ್ಲವೆಂಬ ಅಪರಾಧ ಭಾವನೆ ಅವರಿಗೆ ಕಾಡುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ಗೆ ರಾಜಕೀಯ ಬಹಳ ಮುಖ್ಯ, ಈ ಹಿಂದೆ ಅಧಿಕಾರ ನಡೆಸಿದ ಒಂದು ಪಕ್ಷ ಈ ಉಡಾಫೆಯಿಂದ ವರ್ತಿಸುವುದು ಸರಿಯಲ್ಲ, ಜನರು ಪದೇ ಪದೇ ಮರುಳಾಗಲ್ಲ ಎಂದು ತಿಳಿಸಿದರು.