ನಮ್ಮ ನಡಿಗೆ ತಡೆಯಲು ಏನೇ ಪ್ರಯತ್ನ ಮಾಡಿದರೂ ನಿಲ್ಲದು: ಸಿದ್ದರಾಮಯ್ಯ

Update: 2022-01-09 08:32 GMT

ರಾಮನಗರ, ಜ. 9: ನಮ್ಮ ಜಾಗ ನಮ್ಮ ನೀರು ಮೇಕೆದಾಟು ಯೋಜನೆಗೆ ತಮಿಳುನಾಡು ತಕರಾರು ಮಾಡಲು ಯಾವುದೇ ಆಧಾರ ಇಲ್ಲ. ಹೀಗಿರುವಾಗ ರಾಜ್ಯ ಸರಕಾರ ತಮಿಳುನಾಡಿನ ಜೊತೆಗೆ ಸೇರಿ ರಾಜ್ಯಕ್ಕೆ ದ್ರೋಹ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಕನಕಪುರದ ಸಂಗಮದಲ್ಲಿ ಆಯೋಜಿಸಿದ್ದ ಪಾದಯಾತ್ರೆ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಇಂದಿನಿಂದ ಜ.19 ರ ವರೆಗೆ ನಡೆಯಲಿದೆ. ನಮ್ಮ ನಡಿಗೆ ತಡೆಯಲು ಏನೇ ಪ್ರಯತ್ನ ಮಾಡಿದರೂ ನಿಲ್ಲದು ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ಪರಿಸರ ಅನುಮೋದನೆ ಪಡೆಯದೆ ತಮ್ಮ ದ್ರೋಹ ಮುಚ್ಚಿಕೊಳ್ಳಲು ಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರಾಜ್ಯದ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ನೀರಾವರಿ ಸಚಿವ ಗೋವಿಂದ ಕಾರಜೋಳ ತಮ್ಮ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಮಾಧ್ಯಮಗಳಿಗೆ ಜಾಹಿರಾತು ನೀಡಿದ್ದಾರೆ ಎಂದು ಆರೋಪಿಸಿದರು.

ನಮ್ಮ ಅವಧಿಯಲ್ಲಿ 2017 ರಲ್ಲಿ ಡಿಪಿಆರ್ ತಯಾರು ಮಾಡಿಸಿ ಕೇಂದ್ರ ಸಿಡಬ್ಲ್ಯೂ ಸಿಗೆ ಮಂಡಿಸಿದ್ದು, 2019 ರ ಜನವರಿಯಲ್ಲಿ ಕೇಂದ್ರ ಕೇಳಿದ್ದ ಸ್ಪಷ್ಟನೆಗೆ ಉತ್ತರ ನೀಡಿದ್ದು, ಪರಿಷ್ಕೃತ ಅಂದಾಜು ಪಟ್ಟಿ ಸಿದ್ದಪಡಿಸಿದ್ದರು. ನಮ್ಮ ಅವಧಿಯಲ್ಲಿ ಯಾವುದೇ ವಿಳಂಬ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಅಣೆಕಟ್ಟು ಯೋಜನೆಯಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ.  ತಮಿಳುನಾಡು ರಾಜಕೀಯ ಕಾರಣಕ್ಕಾಗಿ ಕ್ಯಾತೆ ತೆಗೆದಿದ್ದಾರೆ. ಈ ಯೋಜನೆಗೆ ಯಾವುದೇ ತಡೆಯಾಜ್ಞೆ ಇಲ್ಲ ಎಂದು ಹೇಳಿದರು.

ಎರಡೂವರೆ ವರ್ಷದಿಂದ ಡಬಲ್ ಎಂಜಿನ್ ಸರಕಾರ ರಾಜ್ಯದ ಜನತೆಗೆ ದ್ರೋಹ ಮಾಡಿದೆ. ಈ ಯೋಜನೆ ನಮ್ಮ ಕೂಸು. ಯೋಜನೆಗೆ ಪರಿಸರ ಅನುಮೋದನೆ ಪಡೆದುಕೊಳ್ಳಲು ಸಾದ್ಯವಾಗಿಲ್ಲ. ನಿಮಗೆ ನಾಚಿಕೆ ಆಗಬೇಕು ಎಂದು ಸಿದ್ದರಾಮಯ್ಯ ಟೀಕಿಸಿದರು.

ಕುಡಿಯುವ ನೀರಿನ ಯೋಜನೆ, ಬೆಂಗಳೂರು ನಗರದ ಶೇ.30 ರಷ್ಟು ಜನರಿಗೆ ನೀರಿಲ್ಲ. ಅದಕ್ಕಾಗಿ ಪಾದಯಾತ್ರೆ. ಮುಂದಿನ ಐವತ್ತು ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ 177 ಟಿಎಂಸಿ ನೀರು ಕೊಡಬೇಕು. ನಮ್ಮ ಜಾಗ ನಮ್ಮ ನೀರು. ನಾಲ್ಕೈದು ವರ್ಷಗಳಿಂದ 260 ಟಿಎಂಸಿ ನೀರು ನಾಲ್ಕೈದು ವರ್ಷಗಳಲ್ಲಿ ವ್ಯರ್ಥವಾಗಿ ಹರಿದು ಹೋಗಿದೆ. 60 ಟಿಎಂಸಿ ಶೇಖರಣೆಯಾಗಲಿದೆ ಎಂದು ತಿಳಿಸಿದರು.

ಕೋವಿಡ್ ಮಾರ್ಗಸೂಚಿ ಪಾಲಿಸಿ ಮಾಸ್ಕ್, ಸ್ಯಾನಿಟೈಜ್ ಮಾಡಿ ಪಾದಯಾತ್ರೆ ಮಾಡುತ್ತೇವೆ. ನಮ್ಮ ಹೋರಾಟ ನಿಲ್ಲದು. ಚಾಮರಾಜನಗರ, ಮೈಸೂರು ಸೇರಿ ಎಲ್ಲ ಜಿಲ್ಲೆಯ ಜನರು ಬರಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News