×
Ad

ವಿರಾಜಪೇಟೆ: ನಿಧಿಗಾಗಿ ವಾಮಾಚಾರ ನಡೆಸಿದ ಆರೋಪ; ಇಬ್ಬರ ಬಂಧನ

Update: 2022-01-09 20:11 IST
ಸಾಂದರ್ಭಿಕ ಚಿತ್ರ 

ಮಡಿಕೇರಿ ಜ.9 : ವಿರಾಜಪೇಟೆ ತಾಲೂಕು ಸಿದ್ದಾಪುರದ ಚೆನ್ನಯ್ಯನಕೋಟೆ  ಹೊಳಮಾಳ ಗ್ರಾಮದಲ್ಲಿ ವಾಮಾಚಾರ ನಡೆಸಿ ನಿಧಿ ಶೋಧನೆ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಗಳಿಬ್ಬರನ್ನು ಬಂಧಿಸಿದ್ದಾರೆ.

ಚೆನ್ನಯ್ಯನಕೋಟೆ ಹೊಳಮಾಳ ಗ್ರಾಮದ ಕೋಟೆ ಪೈಸಾರಿಯ ಎಂ.ಆರ್.ಗಣೇಶ್ ಹಾಗೂ ಉಡುಪಿ ಜಿಲ್ಲೆಯ ಪಡುಬಿದ್ರೆ ಹಂಚಿನಡ್ಕ ಮೂಲದ ಸಾಧಿಕ್ ಬಂಧಿತರು. 

ಖಚಿತ ಮಾಹಿತಿ ಮೇರೆಗೆ ಹೊಳಮಾಳ ಗ್ರಾಮದ ಎಂ.ಆರ್.ಗಣೇಶ್ ಅವರ ಮನೆಗೆ ದಾಳಿ ನಡೆಸಿದ ಸಂದರ್ಭ ಮಲಗುವ ಕೋಣೆಯಲ್ಲಿ ಸುಮಾರು 15 ಅಡಿಗಳಷ್ಟು ಆಳ ಗುಂಡಿ ತೆಗೆದಿರುವುದು ಕಂಡು ಬಂದಿದೆ. ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಮಂಗಳೂರು  ಹಾಗೂ ಕೇರಳ ಮೂಲದ ವಾಮಾಚಾರಿಗಳ ಬಲೆಗೆ ಬಿದ್ದು ಈ ರೀತಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಸ್ಥಳದಲ್ಲಿ ಕೋಳಿ ಬಲಿ ಪೂಜೆ ನಡೆಸಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಬಲಿ ನೀಡಲು ನಿರ್ಧರಿಸಲಾಗಿತ್ತು ಎನ್ನುವ ಸತ್ಯವನ್ನು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಮುಂದೆ ನಡೆಯಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಅಲ್ಲದೆ ಗುಂಡಿ ತೆಗೆದ ಕಾರಣದಿಂದ ಮನೆಯೂ ಕುಸಿಯುವ ಹಂತಕ್ಕೆ ತಲುಪಿದ್ದು, ಮತ್ತಷ್ಟು ಗುಂಡಿ ತೆಗೆದಿದ್ದರೆ ಅಪಾಯ ಎದುರಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ವಾಮಾಚಾರಕ್ಕೆ ಬಳಸಿದ ಕೆಲವು ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಮಡಿಕೇರಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಗಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಗುಪ್ತದಳದ ಇನ್ಸ್ ಪೆಕ್ಟರ್  ಐ.ಪಿ.ಮೇದಪ್ಪ, ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ವಿ.ವೆಂಕಟೇಶ್,  ಡಿಸಿಐಬಿ ಸಿಬ್ಬಂದಿಗಳಾದ ವೆಂಕಟೇಶ್, ಯೊಗೇಶ್  ಕುಮಾರ್, ನಿರಂಜನ್, ವಸಂತ, ಸುರೇಶ್, ಶರತ್ ರೈ, ಶಶಿಕುಮಾರ್, ಅಭಿಲಾಷ್, ಸಿದ್ದಾಪುರ ಠಾಣೆಯ ಎಎಸ್‍ಐ ಮೊಹಿದ್ದೀನ್, ಸಿಬ್ಬಂದಿಗಳಾದ ಬೆಳಿಯಪ್ಪ, ಲಕ್ಷೀಕಾಂತ್, ಮಲ್ಲಪ್ಪ, ಶಿವಕುಮಾರ್, ಸಿಡಿಆರ್ ಸೆಲ್ ನ ರಾಜೇಶ್, ಗಿರೀಶ್ ಹಾಗೂ ಪ್ರವೀಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News