×
Ad

ಶಿವಮೊಗ್ಗ: ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಬಿದ್ದ ಮೊಸಳೆ ಮರಿ!

Update: 2022-01-09 22:41 IST
ಗಾಳಕ್ಕೆ ಬಿದ್ದ ಮೊಸಳೆ ಮರಿ

ಶಿವಮೊಗ್ಗ, ಜ.09: ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಮೊಸಳೆ ಮರಿ ಸಿಕ್ಕಿಬಿದ್ದ ಘಟನೆ ರವಿವಾರ ನಡೆದಿದೆ. ಇದನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. 

ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ರಶೀದ್ ಅವರಿಗೆ ಮೊಸಳೆ ಸಿಕ್ಕಿದೆ. ಅವರು ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಾ ನದಿಯಲ್ಲಿ ಗಾಳ ಹಾಕಿ, ಮೀನು ಹಿಡಿಯುತ್ತಿದ್ದ ವೇಳೆ  ಗಾಳ ಜಗ್ಗಿದಂತಾಗಿದೆ. ತಕ್ಷಣ ಅವರು ಗಾಳವನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. ಗಾಳದಲ್ಲಿ ಮೀನಿನ ಬದಲು ಮೊಸಳೆ ಮರಿ ಸಿಕ್ಕಿಬಿದ್ದಿದ್ದನ್ನು ಕಂಡು ಅವರು ನೆರೆಹೊರೆಯವರಿಗೆ ವಿಚಾರ ತಿಳಿಸಿದ್ದಾರೆ. 

ತುಂಗಾ ನದಿಯಲ್ಲಿ ಮೊಸಳೆ ಸಂತಾನೋತ್ಪತ್ತಿ:  ಇತ್ತೀಚೆಗೆ ತುಂಗಾ, ಭದ್ರಾ ನದಿಗಳ ಸಂಗಮ ಸ್ಥಳವಾದ ಕೂಡಲಿಯಲ್ಲಿ ಮೊಸಳೆ ಪ್ರಯತ್ಯಕ್ಷವಾಗಿತ್ತು. ಈಗ ಕೂಡಲಿ ಸಮೀಪದ ಪಿಳ್ಳಂಗಿರಿ ಬಳಿ ಮೊಸಳೆ ಮರಿ ಪ್ರತ್ಯಕ್ಷವಾಗಿದ್ದು, ಸಂತಾನೋತ್ಪತ್ತಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ತುಂಗಾ ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಈ ಭಾಗವ ಜನರಲ್ಲಿ ಭಯ ಮೂಡಿಸಿದೆ. 

ಜನರು ತುಂಗಾ ನದಿ ಬಳಿಗೆ ಹೋಗಿ ಬರುತ್ತಾರೆ. ದನಕರುಗಳು ಕೂಡ ನೀರು ಕುಡಿಯಲು ಹೊಳೆ ಬಳಿಗೆ ಬರುತ್ತವೆ. ಮೊಸಳೆಗಳು ಇರುವುದು ಗೊತ್ತಾಗುತ್ತಿದ್ದಂತೆ ಜನರು ಎಚ್ಚೆತ್ತುಕೊಂಡಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News