ನಕಲಿ ಆಡಿಯೋ ಸೃಷ್ಟಿಸಿ ತೇಜೋವಧೆ : 6 ಮಂದಿಯ ವಿರುದ್ಧ ಪತ್ರಕರ್ತ ನವೀನ್ ಸೂರಿಂಜೆ ದೂರು

Update: 2022-01-10 09:15 GMT
Photo: Facebook.com/Naveen Soorinje

ಬೆಂಗಳೂರು: ಪತ್ರಕರ್ತ ಹಾಗೂ ಸದ್ಯ ಬಿಟಿವಿ ಸುದ್ದಿ ವಾಹಿನಿಯ ಸಂಪಾದಕರಾಗಿರುವ ನವೀನ್‌ ಸೂರಿಂಜೆ ಕುರಿತು ತಿರುಚಲ್ಪಟ್ಟ ಆಡಿಯೋಗಳನ್ನು ಸೃಷ್ಟಿಸಿ ಪ್ರಸಾರ ಮಾಡಿರುವ ಕುರಿತು ಅವರು ವಿಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮರಳು ಮಾಫಿಯಾ ಕುರಿತು ವರದಿ ಮಾಡಿದ್ದರ ಪ್ರತಿಕಾರವಾಗಿ ಒಂದು ವರ್ಷಕ್ಕಿಂತ ಹಳೆಯ ಆಡಿಯೋಗಳನ್ನು ತಿರುಚಲಾಗಿದೆ ಎಂದು ದೂರಿನಲ್ಲಿ ಹಾಗೂ ತಮ್ಮ ಫೇಸ್‌ ಬುಕ್‌ ಖಾತೆಯ ಪೋಸ್ಟ್‌ ನಲ್ಲಿ ಉಲ್ಲೇಖಿಸಿದ್ದಾರೆ. 

ಈ ಸಂಬಂಧ ರಾಕೇಶ್‌ ಶೆಟ್ಟಿ, ಅರುಣ್‌, ರಾಘವ ಸೂರ್ಯ, ರವೀಂದ್ರ ರೇಷ್ಮೆ, ಪ್ರಶಾಂತ್‌ ಬಿಸ್ಲೆರಿ ಹಾಗೂ ಆಡಿಯೋದಲ್ಲಿ ಉಲ್ಲೇಖಿಸಿರುವ ನಿಗೂಢ ವ್ಯಕ್ತಿಯೋರ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಅವರ ಫೇಸ್‌ ಬುಕ್‌ ಪೋಸ್ಟ್‌ ಹೀಗಿದೆ.

ಎಲ್ಲಾ ಪತ್ರಕರ್ತರನ್ನು ಕನಿಷ್ಠ ಎರಡು ತಿಂಗಳು ಜೈಲಿಗೆ ಹಾಕಬೇಕು. ಆಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ತಾನು ಮಾಡುವ ಸುದ್ದಿಯ ಪರಿಣಾಮ ವ್ಯಕ್ತಿಗಳ ಮೇಲೆ ಬೀರುವ ಪರಿಣಾಮ ಎಂತದ್ದು ಎಂದು ಜೈಲಿನಲ್ಲಿ ಇದ್ದಾಗ ಅರಿವಾಗುತ್ತದೆ. ನಾನೇ ಯಾರದ್ದೋ ಮಾತು ಕೇಳಿ, ಪೊಲೀಸರ ಹೇಳಿಕೆ ಪಡೆದೂ ಮಾಡಿದ ಸುದ್ದಿಗಳಲ್ಲಿ ಎಷ್ಟು ಸುಳ್ಳಿದೆ ಎಂಬುದು ಜೈಲಿನಲ್ಲಿ ಪತ್ರಕರ್ತನಿಗೆ ಅರಿವಾಗುತ್ತದೆ. ಒಂದೋ ಪತ್ರಕರ್ತರಿಗೆ ಜೈಲು ಇಂಟರ್ನ್ಶಿಪ್ ಕಡ್ಡಾಯ ಮಾಡಬೇಕು ಅಥವಾ ಪ್ರಸಾರವಾದ ಸುಳ್ಳು ಸುದ್ದಿ ಸಂಬಂಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು.

ನಾನೀಗ ಕೆಲವರನ್ನು ಜೈಲು ಸೇರಿಸಲು ಸಿದ್ದತೆ ನಡೆಸುತ್ತಿದ್ದೇನೆ. 

ನಾನು ಪತ್ರಿಕೆಯೊಂದರ ತಾಲೂಕು ಬಿಡಿ ವರದಿಗಾರ(ಸ್ಟ್ರಿಂಜರ್) ಆಗಿ ಕೆಲಸಕ್ಕೆ ಸೇರಿದವನು ಈಗ ಸಂಪಾದಕ ಹುದ್ದೆಯನ್ನು ಹೊಂದುವವರೆಗೆ ಹಲವು ಪತ್ರಿಕೆ ಮತ್ತು ಟಿವಿಗಳಲ್ಲಿ ಕೆಲಸ ಮಾಡಿದ್ದೇನೆ. ಪತ್ರಿಕೆ ಮತ್ತು ಟಿವಿ ವಾಹಿನಿಗಳ ಪೈಪೋಟಿಯ ಮಧ್ಯೆ ವರದಿಗಾರರು, ಸಿಬ್ಬಂದಿಗಳನ್ನು ತಮ್ಮ ಮಾದ್ಯಮಗಳಲ್ಲಿ ಮಾಲೀಕರು ಟಾರ್ಗೆಟ್ ಮಾಡುವುದನ್ನು ಅನುಭವಿಸಿಕೊಂಡು ಬಂದವನು. ಎರಡು ಪತ್ರಿಕೆಗಳ ಗಲಾಟೆಯ ಹಿನ್ನಲೆಯಲ್ಲಿ ಒಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ವಿರುದ್ಧ ಮತ್ತೊಂದು ಪತ್ರಿಕೆಯಲ್ಲಿ ಅನಪೇಕ್ಷಿತ ಸುದ್ದಿ ಪ್ರಕಟವಾಗಿತ್ತು. ಆಗ ಅದನ್ನು ನಿರ್ಲಕ್ಷ್ಯ ಮಾಡಿದ್ದೆ.

ಈಗ ಇಂತದ್ದೇ ಪೈಪೋಟಿಯಲ್ಲಿ ನನ್ನ ನಕಲಿ ಆಡಿಯೋವೊಂದನ್ನು ಸೃಷ್ಟಿಸಿ ಸಂಬಂಧಪಡದ ಪ್ರಕರಣಕ್ಕೆ ಥಳಕು ಹಾಕುವ ಕೆಲಸ ನಡೆದಿದೆ. ನಾನು ಆಗಲೇ ಹೇಳಿದಂತೆ ತಾಲೂಕು ಬಿಡಿ ವರದಿಗಾರ ಹುದ್ದೆಯಿಂದ ಹಿಡಿದು ಸಂಪಾದಕನ ಹುದ್ದೆಯವರೆಗೆ ಈವರೆಗೂ ಲಂಚ ತೆಗೆದುಕೊಂಡಿಲ್ಲ. ಯಾವ ರಾಜಕಾರಣಿ, ಉಧ್ಯಮಿಯ ಮನೆಯಲ್ಲಿ ಊಟ ಮಾಡಿಲ್ಲ, ಪಾರ್ಟಿಗಳಲ್ಲಿ ಭಾಗಿಯಾಗಿಲ್ಲ. ನನ್ನ ವೈಯುಕ್ತಿಕ ವಿಷಯಗಳಿಗೆ ರಾಜಕಾರಣಿಗಳ ಸಹಾಯ ಪಡೆದಿಲ್ಲ. ಯಾವುದೇ ರಾಜಕಾರಣಿ ಮತ್ತು ಉದ್ಯಮಿಗಳನ್ನು ನನ್ನ ಖಾಸಗಿ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಲಾಭ ಪಡೆದಿಲ್ಲ. ಆದರೆ ನನ್ನ ಸಂಸ್ಥೆಯ ಸಂಬಂಧದ ಅಧಿಕೃತ ಹಣಕಾಸು ವ್ಯವಹಾರಗಳನ್ನು ಹಲವರ ಜೊತೆ ಹುದ್ದೆಯ ಕಾರಣಕ್ಕಾಗಿ ಅಧಿಕೃತವಾಗಿ ಮಾತನಾಡಿದ್ದೇನೆ. ನಾನು ಕೆಲಸ ಮಾಡುವ ಸಂಸ್ಥೆಯ ಅಧಿಕೃತ ಹಣಕಾಸು ವ್ಯವಹಾರಗಳಲ್ಲಿ ನನ್ನ ಭಾಗಿದಾರಿಕೆಯ ಅಗತ್ಯವಿದ್ದಾಗ ಆ ಕರ್ತವ್ಯ ಮಾಡುವುದು ಅನಿವಾರ್ಯ.  

ನಾನು ವರ್ಷಗಳ ಹಿಂದೆ ಯಾರ ಜೊತೆಯೋ ಮೂರ್ನಾಲ್ಕು ಬಾರಿ ಮಾತನಾಡಿದ್ದ ಫೋನ್ ಕರೆಯನ್ನು ಎಡಿಟ್ ಮಾಡಿ ಅದನ್ನೆಲ್ಲಾ ಜೋಡಿಸಿ ಒಂದು ಫೋನ್ ಕರೆ ಎಂದು ಬಿಂಬಿಸಿ ನನ್ನ ಆಡಿಯೋವನ್ನು ಪ್ರಸಾರಿಸಲಾಗಿದೆ. ಆ ಎಡಿಟೆಡ್ ನಕಲಿ ಆಡಿಯೋಗೆ ತಲೆಬರಹ, ಅಡಿಬರಹ ಕೊಟ್ಟು ಬೇರೆಯದ್ದೇ ರೀತಿಯ ಅಪಾರ್ಥ ಬರುವ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ನನ್ನ ಮನಸ್ಸಿಗೆ ಘಾಸಿಯಾಗಿದೆ.

ಈವರೆಗೂ ವೈಯುಕ್ತಿಕವಾಗಿ ಯಾವುದೇ ರೀತಿಯಲ್ಲಿ ನನ್ನ ಸಿದ್ದಾಂತದಲ್ಲಿ ರಾಜಿಯಾಗಿಲ್ಲ. ನನಗೆ ಮತ್ತು ನನ್ನ ಕುಟುಂಬಕ್ಕೆ ಬೇಕಾಗುವಷ್ಟು ಮಾತ್ರವಲ್ಲದೆ ಸಾಕು ಸಾಕಾಗುವಷ್ಟು ವೇತನವನ್ನು ನಾನು ಪಡೆಯುತ್ತಿದ್ದೇನೆ. ನಾನು ನನ್ನ ಸಂಗಾತಿ ಮತ್ತು ನನ್ನ ತಂದೆ ತಾಯಿಗಾಗಿ ನನ್ನ ವೇತನ ಮೀಸಲಾಗಿದ್ದು, ನಾನು ಉತ್ತಮ ವೇತನ ಪಡೆಯುತ್ತಿದ್ದರೂ ಇನ್ನೂ ಬೈಕ್ ನಿಂದ ಕಾರಿಗೆ ಶಿಫ್ಟ್ ಆಗಲು ಸಾಧ್ಯವಾಗಿಲ್ಲ. ನನ್ನ ಮೂಗಿಗೆ ದೂಳಿನ ಅಲರ್ಜಿ ಇರುವುದರಿಂದ ಚಿಕ್ಕದಾದ ಒಂದು ಕಾರು ಅಗತ್ಯವಿದ್ದರೂ ಕೆಲ ಲೋನ್ ಬಾಕಿ ಹಿನ್ನಲೆಯಲ್ಲಿ ಕಾರು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ಲೋನ್ ಕ್ಲೀಯರ್ ಆದ ಬಳಿಕ ಕಾರು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದೇನೆ.

ಕರಾವಳಿ ಅಲೆ ಪತ್ರಿಕೆಯಿಂದ ಬಿಟಿವಿಯವರೆಗೆ ವೃತ್ತಿ ಮತ್ತು ಹುದ್ದೆಯ ಹಿನ್ನಲೆಯಲ್ಲಿ ಸಂಸ್ಥೆಯ ಜಾಹೀರಾತಿನ ವಿಚಾರದಲ್ಲಿ ಹಲವರ ಜೊತೆ ಅಧಿಕೃತವಾಗಿ ಮಾತನಾಡಿರಬಹುದು. ಅದನ್ನು ಹೊರತುಪಡಿಸಿ ವೈಯುಕ್ತಿಕವಾಗಿ ಈವರೆಗಿನ ಪತ್ರಿಕಾ ಜೀವನದಲ್ಲಿ ಲಂಚ, ರಾಜಕಾರಣಿ/ಉದ್ಯಮಿಗಳ ಡಿನ್ನರ್ ಪಾರ್ಟಿ, ರಾಜಕಾರಣಿಗಳ ವೈಯುಕ್ತಿಕ ಒಡನಾಟ ಇಟ್ಟುಕೊಂಡಿಲ್ಲ. ಆದ್ದರಿಂದ ನನ್ನ ಒಂದು ವರ್ಷಕ್ಕಿಂತಲೂ ಹಳೆಯ ಯಾವುದೋ ಸಂದರ್ಭದ ಹಲವು ಫೋನ್ ಕರೆಗಳನ್ನು ಜೋಡಿಸಿ ನಕಲಿ/ಎಡಿಟೆಡ್ ಆಡಿಯೋ ಸೃಷ್ಟಿಸಿದ ವ್ಯಕ್ತಿಗಳ ವಿರುದ್ದ IPC 468, 469, 470 ಕಲಂಗಳಡಿಯಲ್ಲಿ ಪ್ರಕರಣ ದಾಖಲಿಸುತ್ತಿದ್ದೇನೆ.

ನನ್ನ ಗೆಳೆಯರು, ಹಿರಿಯರು ಯಾರೂ ಕೂಡಾ ಈ  ನಕಲಿ ಎಡಿಟೆಡ್ ಆಡಿಯೊ ಬಗ್ಗೆ ನನ್ನನ್ನು ಪ್ರಶ್ನಿಸಿಲ್ಲ. ಆದರೂ ನನ್ನ ಕರ್ತವ್ಯ ಎಂದು ಈ ಸ್ಪಷ್ಟನೆ ನೀಡುತ್ತಿದ್ದೇನೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News