ಕೊಪ್ಪ: ಸಹಕಾರಿ ಸಾರಿಗೆ ಸಂಸ್ಥೆ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಡಿಸಿಗೆ ಮನವಿ
ಚಿಕ್ಕಮಗಳೂರು, ಜ.10: ತಾಲೂಕಿನ ಕೊಪ್ಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಕಾರಿ ಸಾರಿಗೆ ಸಂಸ್ಥೆ ಸ್ಥಗಿತಗೊಂಡು ಎರಡು ವಷಗಳು ಕಳೆದಿದೆ. ಇದರಿಂದ ಸ್ಥಳೀಯ ಕಾರ್ಮಿಕರು ಉದ್ಯೋಗ, ವೇತನವಿಲ್ಲದೇ ಬೀದಿಪಾಲಾಗಿದ್ದಾರೆ. ಅವರ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕು ಎಂದು ಜಿಲ್ಲಾ ಟ್ರಾನ್ಸ್‍ಪೋರ್ಟ್ ಜನರಲ್ ಮಜ್ದೂರ್ ಸಂಘ ಮುಖ್ಯಮಂತ್ರಿಯನ್ನು ಆಗ್ರಹಿಸಿದೆ.
ಸೋಮವಾರ ಈ ಸಂಬಂಧ ಸಂಘದ ಮುಖಂಡರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ, ಕಾರ್ಮಿಕರ ಸಮಸ್ಯೆಯನ್ನೂ ಕೂಡಲೇ ಬಗೆಹರಿಸಬೇಕು ಹಾಗೂ ಆಡಳಿತ ಮಂಡಳಿಯನ್ನು ಪುನರ್ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಕೊಪ್ಪದ ಸಹಕಾರಿ ಸಾರಿಗೆ ಸಂಸ್ಥೆ ಕಳೆದ 29ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬಂದು ಮಲೆನಾಡಿನ ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಇಂತಹ ಸಂಸ್ಥೆ ಸ್ಥಗಿತಗೊಳ್ಳುವುದಕ್ಕಿಂತ ಮೊದಲು ಕಳೆದ ಎರಡು ವರ್ಷಗಳ ಹಿಂದೆ ಲಾಭದಲ್ಲಿತ್ತು ಎಂಬುದನ್ನು ಲೆಕ್ಕ ಪರಿಶೋಧಕರ ವರದಿಯಲ್ಲಿ ಸ್ಪಷ್ಟವಾಗಿದೆ. ಕೆಲವು ವರ್ಷಗಳ ಹಿಂದೆ ಸಾರಿಗೆ ಸಂಸ್ಥೆಗೆ ಕೋಟ್ಯಾಂತರ ರೂ. ಆರ್ಥಿಕ ನಷ್ಟ ಉಂಟಾಗಿದೆ ಎಂಬ ನೆಪವೊಡ್ಡಿ ಆಡಳಿತ ಮಂಡಳಿಯು ಸಂಸ್ಥೆಯನ್ನು ಎರಡು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಿದೆ. ಈ ನಡುವೆ ಸ್ಥಳೀಯ ನೌಕರರು ಕೆಲಸವಿಲ್ಲದೇ ಕುಟುಂಬ ನಿರ್ವಹಣೆ ಮಾಡಲಾಗದೇ ಬೀದಿಪಾಲಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಾರಿಗೆ ಸಂಸ್ಥೆಯನ್ನು ಸ್ಥಗಿತಗೊಳಿಸುವ ಮುನ್ನ ಒಂದು ವರ್ಷದ ಹಿಂದೆ ಆಡಳಿತ ಮಂಡಳಿಯು ಯಾವ ಬಸ್ಸ್ಸುಗಳಿಗೂ ತೆರಿಗೆಯನ್ನು ಸರಕಾರಕ್ಕೆ ಪಾವತಿಸಿಲ್ಲ. ಮಾರ್ಗ ಪರವಾನಿಗೆಗಳ ನವೀಕರಣ ಮಾಡಿಸಿಲ್ಲ. ನೌಕರರ ಭವಿಷ್ಯನಿಧಿ ಹಣವನ್ನು ಸಂಬಂಧಪಟ್ಟ ಇಲಾಖೆಗೆ ಪಾವತಿಸಿಲ್ಲ. ಹಾಗಾದರೆ ಎರಡು ವರ್ಷಗಳಿಂದ ಸಂಸ್ಥೆ ಗಳಿಸಿದ್ದ ಆದಾಯ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿರುವ ಮುಖಂಡರು, ಆಡಳಿತ ಮಂಡಳಿಯವರು ಹಣ ದುರುಪಯೋಗ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕಾರಣಕ್ಕಾಗಿ ಸಹಕಾರಿ ಕಾಯ್ದೆ 64ರ ಅನ್ವಯ ತನಿಖೆಗೆ ಅಲ್ಲಿನ ಷೇರುದಾರರು ಒತ್ತಾಯಿಸಿದ ಮೇರೆಗೆ ತನಿಖೆಗೆ ಆದೇಶವಾಗಿದ್ದು, ತನಿಖಾಧಿಕಾರಿಗಳು ಬಂದ ಸಂದರ್ಭದಲ್ಲಿ ಕೊಪ್ಪದ ಫೈನಾನ್ಸ್ ಕಂಪೆನಿಯೊಂದು ಆಡಳಿತ ಕಚೇರಿಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮುಟ್ಟುಗೋಲು ಹಾಕಿಕೊಂಡಿದ್ದು, ತನಿಖೆಗೆ ಅಡಚಣೆಯಾಗಿದೆ ಎಂದು ತಿಳಿಸಿರುವ ಸಂಘದ ಮುಖಂಡರು, ಜಿಲ್ಲಾಧಿಕಾರಿ ಕಚೇರಿ ಬೀಗ ತೆರವುಗೊಳಿಸಿ ತನಿಖೆಗೆ ಸಹಕಾರ ನೀಡಲು ಸಂಬಂಧಪಟ್ಟ ಫೈನಾನ್ಸ್ ನವರಿಗೆ ಸೂಚಿಸಿದ್ದರೂ ಸಹ ಅದಕ್ಕೆ ಅವರು ಬೆಲೆ ಕೊಡದೇ ಇರುವುದರಿಂದ ತನಿಖೆ ಮೂಲೆ ಗುಂಪಾಗಿದೆ ಎಂದು ದೂರಿದರು.
ಕೂಡಲೇ ಸಂಸ್ಥೆಯಲ್ಲಿ ಕಾರ್ಯಚಟುವಟಿಕೆ ನಡೆಸಲು ಆಡಳಿತ ಮಂಡಳಿಯ ಆಗತ್ಯವಿದ್ದು, ವಿಶೇಷ ಅಧಿಕಾರಿಯನ್ನು ನೇಮಿಸಿ ಚುನಾವಣೆ ನಡೆಸಲು ಆದೇಶಿಸಬೇಕು. ಜೊತೆಗೆ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಾಗಬೇಕು ಎಂದು ಮನವಿ ಮೂಲಕ ಮುಖಂಡರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಚ್.ಆರ್.ಸಂಜೀವ, ಉಪಾಧ್ಯಕ್ಷ ಎಚ್.ಸಿ.ಕಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಬಿ.ರಮೇಶ್‍ಗೌಡ, ನಾಗೇಶ್ ಸುಬ್ರಹ್ಮಣ್ಯ, ರಘುನಾಥ, ಹಾಲಪ್ಪಗೌಡ, ರಘು, ಪುಷ್ಪಾವತಿ, ಎಂ.ಸಿ.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.