ಸಚಿವ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ ಮೇಲ್ ಪ್ರಕರಣ: ಸಿಸಿಬಿಯಿಂದ ತೀವ್ರ ವಿಚಾರಣೆ, 8 ಮಂದಿಯ ಹೇಳಿಕೆ ದಾಖಲು

Update: 2022-01-10 13:11 GMT

ಬೆಂಗಳೂರು, ಜ.10: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ ಮೇಲ್ ಸಂಬಂಧ ಬಂಧನಕ್ಕೆ ಒಳಗಾಗಿರುವ ರಾಹುಲ್ ಭಟ್‍ನ ವಿಚಾರಣೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಇದುವರೆಗೂ ಎಂಟು ಮಂದಿಯ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.

ಸಚಿವ ಎಸ್.ಟಿ.ಸೋಮಶೇಖರ್, ಪುತ್ರ ನಿಶಾಂತ್, ಆಪ್ತ ಕಾರ್ಯದರ್ಶಿಗಳಾದ ಭಾನುಪ್ರಕಾಶ್, ಶ್ರೀನಿವಾಸ್ ಗೌಡ, ಇಂಡಿ ಶಾಸಕ ಯಶವಂತರಾಯ್ ಪಾಟೀಲ್ ಮತ್ತು ಅವರ ಪುತ್ರಿ, ಆರೋಪಿ ರಾಹುಲ್ ಭಟ್‍ಗೆ ಸಿಮ್ ಕೊಟ್ಟಿದ್ದ ಎನ್ನಲಾಗಿರುವ ಮುಂಬೈನ ರಾಕೇಶ್ ಹೇಳಿಕೆ ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಬಂಧನಕ್ಕೊಳಗಾಗಿರುವ ಆರೋಪಿ ರಾಹುಲ್ ಭಟ್‍ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅದೇ ರೀತಿ, ಜಪ್ತಿ ಮಾಡಿಕೊಂಡಿದ್ದ ಮೊಬೈಲ್ ಪರಿಶೀಲನೆ ನಡೆಸಿದಾಗ ನಿಶಾಂತ್‍ಗೆ ಸಂಬಂಧಿಸಿದ ವಿಡಿಯೊ ಪತ್ತೆಯಾಗಿರುವುದು ಕಂಡುಬಂದಿದೆ. ಕಡತ ಸಂಗ್ರಹಕ್ಕಾಗಿ ಮೊಬೈಲ್ ಅನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಶಾಸಕ ಸ್ಪಷ್ಟನೆ 

ನನ್ನ ಪುತ್ರಿ ಕಳೆದ ಮಾರ್ಚ್‍ನಲ್ಲಿ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದು, ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪಷ್ಟನೆ ನೀಡಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ತನ್ನ ಮಗಳ ಪಾತ್ರವಿಲ್ಲ. ಈ ವಿಚಾರವಾಗಿ ನಾನು ಸಚಿವ ಸೋಮಶೇಖರ್ ಅವರನ್ನು ಭೇಟಿ ಮಾಡಿದ್ದೇನೆ. ತನ್ನ ಮಗಳ ಮೇಲೆ ವಿನಾಕಾರಣ ಆರೋಪ ಬಂದಿದೆ. ತಪ್ಪಿತಸ್ಥರು ಯಾರೇ ಇದ್ದರೂ, ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News