ಕೆಪಿಎಲ್ ಬೆಟ್ಟಿಂಗ್: ಆಟಗಾರರ ವಿರುದ್ಧದ ಕೇಸ್ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು, ಜ.10: ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ(ಕೆಪಿಎಲ್) ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆಟಗಾರರ ವಿರುದ್ಧ ಸಿಸಿಬಿ ಸಲ್ಲಿಸಿದ್ದ ಚಾರ್ಜ್‍ಶೀಟ್ ಅನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
ಆಟಗಾರರಾದ ಸಿ.ಎಂ.ಗೌತಮ್, ಅಮಿತ್ ಮಾವಿ, ಅಲಿ ಅಶ್ಫಾಕ್ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಬೆಟ್ಟಿಂಗ್ ಪ್ರಕರಣ: 2019ರಲ್ಲಿ ನಡೆದ ಬಳ್ಳಾರಿ ಟಸ್ಕರ್ಸ್-ಹುಬ್ಬಳ್ಳಿ ಟೈಗರ್ಸ್ ನಡುವಿನ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ ಎಂಬ ಆರೋಪದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ.ಎಂ.ಗೌತಮ್ ಹಾಗೂ ಅಲಿ ಅಶ್ಫಾಕ್ ಬಂಧಿಸಲಾಗಿತ್ತು. ಮಂದಗತಿಯ ಬ್ಯಾಟಿಂಗ್ ನಡೆಸಲು ಇಬ್ಬರು ಆಟಗಾರರು 20 ಲಕ್ಷ ಹಣಪಡೆದಿದ್ದು, ಬೆಂಗಳೂರು ವಿರುದ್ಧದ ಮತ್ತೊಂದು ಪಂದ್ಯದಲ್ಲೂ ಫಿಕ್ಸಿಂಗ್ ನಡೆಸಿದ್ದರು ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು.
ಬಂಧಿತ ಆಟಗಾರ ಸಿ.ಎಂ.ಗೌತಮ್ ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‍ಮನ್ ಆಗಿದ್ದರು. ಆರ್‍ಸಿಬಿ, ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದರು.
2012-13ನೆ ಸಾಲಿನ ರಣಜಿ ಋತುವಿನಲ್ಲಿ ರಾಜ್ಯದ ಪರ ಅತೀ ಹೆಚ್ಚು ರನ್ ಗಳಿಸಿದ್ದ ಎರಡನೆ ಆಟಗಾರನಾಗಿ ಹೊರಹೊಮ್ಮಿದ್ದರು. ಅದೇ ಪ್ರದರ್ಶನದ ಆಧಾರದಲ್ಲಿ ಇಂಡಿಯಾ ಎ ತಂಡವನ್ನೂ ಪ್ರತಿನಿಧಿಸಿದ್ದರು. ಆದರೆ ನಂತರ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದರು. ಮತ್ತೊಬ್ಬ ಬಂಧಿತ ಆಟಗಾರ ಅಬ್ರಾರ್ ಖಾಜಿ ಸದ್ಯ ಮಿಝೋರಮ ತಂಡವನ್ನು ಪ್ರತಿನಿಧಿಸುತ್ತಿದ್ದರು.