ಪಾದಯಾತ್ರೆ ವೇಳೆ ಬಾಲ್ಯ ಗೆಳೆಯ ನಾಗರಾಜ್‍ರಿಂದ ಕ್ಷೌರ ಮಾಡಿಕೊಂಡ ಡಿ.ಕೆ.ಶಿವಕುಮಾರ್

Update: 2022-01-10 16:36 GMT

ಬೆಂಗಳೂರು, ಜ. 10: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ `ನೀರಿಗಾಗಿ ನಡಿಗೆ' ಪಾದಯಾತ್ರೆ ಹತ್ತು ಹಲವು ವಿಶೇಷ, ವೈಶಿಷ್ಟ್ಯತೆಗಳಿಗೆ ಸಾಕ್ಷಿಯಾಗಿದ್ದು, ಯಾತ್ರೆಯ ಮಾರ್ಗದಲ್ಲಿ ಜನರ ಅಚ್ಚರಿ ಮತ್ತು ಭಾರೀ ಕುತೂಹಲಕ್ಕೆ ಸಾಕ್ಷಿಯಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿ ನಿನ್ನೆ ರಾತ್ರಿ ತಂಗಿದ್ದು, ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಬಾಲ್ಯದ ಗೆಳೆಯ ಕ್ಷೌರಿಕ ನಾಗರಾಜ್ ಅವರಿಂದ ಕ್ಷೌರ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದರು. ಕ್ಷೌರಿಕ ನಾಗರಾಜ್ ಅವರು, ತಮ್ಮ ಗೆಳೆಯ `ನಾಯಕ' ಎಂಬ ಯಾವುದೇ ಬಿಗುಮಾನವಿಲ್ಲದೇ ಡಿ.ಕೆ.ಶಿವಕುಮಾರ್ ಅವರ ಗಡ್ಡ-ಮೀಸೆ ಟ್ರಿಮ್ ಮಾಡಿದರು.

ಬಳಿಕ ಡಿ.ಕೆ.ಶಿವಕುಮಾರ್ ತಮ್ಮ ನಿವಾಸದಲ್ಲಿ ಸ್ನಾನ ಮಾಡಿ, ಮನೆಯಲ್ಲೇ ವಿಶೇಷ ಪೂಜೆ ಸಲ್ಲಿಸಿ ಉಪಾಹಾರ ಸೇವಿಸಿ ಪಾದಯಾತ್ರೆಗೆ ಅಣಿಯಾದರು. ಪಾದಯಾತ್ರೆ ನಡುವೆಯೇ ಡಿ.ಕೆ.ಶಿವಕುಮಾರ್ ಅವರು ಮರಳೇಗವಿ ಮಠಕ್ಕೆ ಭೇಟಿ ನೀಡಿ ಡಾ.ಮುಮ್ಮಡಿ ಶಿವರುದ್ರ ಸ್ವಾಮೀಜಿ ಆಶೀರ್ವಾದ ಪಡೆದರು. ದೊಡ್ಡಾಲಹಳ್ಳಿ ಸಮೀಪದಲ್ಲಿನ ಕೃಷ್ಣಯ್ಯನದೊಡ್ಡಿಯಲ್ಲಿನ ಶಾಲಾ ಮಕ್ಕಳೊಂದಿಗೆ ಶಿವಕುಮಾರ್ ಅವರು ಹೆಜ್ಜೆ ಹಾಕಿದರು. `ನಮ್ಮ ನೀರು ನಮ್ಮ ಹಕ್ಕು' ಎಂದು ಘೋಷಣೆ ಕೂಗಿದ ಮಕ್ಕಳು ಡಿ.ಕೆ.ಶಿವಕುಮಾರ್ ಅವರನ್ನು ಹುರಿದುಂಬಿಸಿದ್ದು ನಡೆಯಿತು.

ಅಡ್ಡೆಯಲ್ಲಿ ಬಿಂದಿಗೆ ಹೊತ್ತು ತಂದ ಹುಸೈನ್: ನಿನ್ನೆ ಕಾವೇರಿ, ಅರ್ಕಾವತಿ ನದಿಗಳ ಸಂಗಮ ಸ್ಥಳದಿಂದ ಆರಂಭವಾದ ಪಾದಯಾತ್ರೆಯಲ್ಲಿ ಬಿದಿರಿನ ಅಡ್ಡೆಯಲ್ಲಿ ಎರಡು ಬಿಂದಿಗಳ ತುಂಬ ಕಾವೇರಿ ನೀರನ್ನು ತುಂಬಿಕೊಂಡು ಪಾದಯಾತ್ರೆಯಲ್ಲಿ ಹೊತ್ತು ಸಾಗುತ್ತಿದ್ದ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಎ.ಹುಸೇನ್ ಅವರು ನಡಿಗೆಯಲ್ಲಿ ಆಕರ್ಷಣೆಯಾಗಿದ್ದರು. ಹಲವು ಮಂದಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕಂಡುಬಂತು.

ಸಂಗಮದಲ್ಲಿ ಸ್ವಚ್ಛತೆ: ಸಂಗಮ ಸ್ಥಳ ಅರಣ್ಯ ಪ್ರದೇಶದಲ್ಲಿದ್ದು ಪರಿಸರ ಸೂಕ್ಷ್ಮ ವಲಯ. ನಿನ್ನೆಯ ಪಾದಯಾತ್ರೆ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಜನತೆ ನೀರಿನ ಬಾಟಲಿ, ಪ್ಲಾಸ್ಟಿಕ್ ಸೇರಿದಂತೆ ಇತರೆ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಬಿಸಾಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸೂಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಗಮ ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಸಾಗಿದ ಪಾದಯಾತ್ರೆ ಮಾರ್ಗದಲ್ಲಿ ಬಾಟಲಿ, ಪ್ಲಾಸ್ಟಿಕ್ ವಸ್ತುಗಳನ್ನು ಆಯ್ದು ಸ್ವಚ್ಛ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News