ನೀರಿನ ವಿವಾದ: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಸಿಪಿಎಂ ಆಗ್ರಹ

Update: 2022-01-12 18:42 GMT

ಬೆಂಗಳೂರು, ಜ. 12: ರಾಜ್ಯದ ನೀರಿನ ವಿಚಾರಕ್ಕೆ ಸಂಬಂಧಿಸಿದ ಮೇಕೆದಾಟು, ಕಳಸ-ಬಂಡೂರಿ ಸೇರಿದಂತೆ ಇನ್ನಿತರ ವಿವಾದಗಳ ಇತ್ಯರ್ಥಕ್ಕೆ ಪ್ರಧಾನಿ ಮೋದಿಯವರು ಕೂಡಲೇ ಮಧ್ಯಪ್ರವೇಶಿಸಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಆಗ್ರಹಿಸಿದ್ದಾರೆ.

ಒಕ್ಕೂಟ ಸರಕಾರ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮವಹಿಸದೇ ಇರುವುದರಿಂದ ಜಲ ವಿವಾದಗಳು ದೀರ್ಘ ಕಾಲ ವಿವಾದಗಳಾಗಿಯೇ ಉಳಿಯುವಂತಾಗಿದೆ. ಈ ಕುರಿತಂತೆ ಉದಾಸೀನ ಸಲ್ಲ. ಅಂತರರಾಜ್ಯ ವಿವಾದಗಳು ಉದ್ಭವಿಸಿದ ಕೂಡಲೇ ಅದನ್ನು ವಿಳಂಬವಿಲ್ಲದೆ ಸಮ್ಮತ ಪರಿಹಾರ ಕಂಡುಕೊಳ್ಳಲು ಸರ್ವಪ್ರಯತ್ನ ಮಾಡುವುದು, ಪರಸ್ಪರ ದ್ವೇಷ ಬೆಳೆಯದಂತೆ ನೋಡಿಕೊಳ್ಳುವುದು ಕೇಂದ್ರ ಸರಕಾರದ ಹೊಣೆಗಾರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರಕಾರವೂ ಈ ದಿಶೆಯಲ್ಲಿ ಒಕ್ಕೂಟ ಸರಕಾರದ ಮೇಲೆ ಅಗತ್ಯ ಒತ್ತಡವನ್ನು ಹಾಕಬೇಕು, ತಾನಾಗಿಯೇ ಪರಿಹಾರ ಸಿಗಲಿ ಎಂದು ಕಾದು ಕುಳಿತುಕೊಳ್ಳುವ ನೀತಿಯು, ಜನವಿರೋಧಿ ನೀತಿಯಾಗುತ್ತದೆ. ವಿವಾದಗಳನ್ನು ಸ್ವಾರ್ಥದ ರಾಜಕೀಯಕ್ಕೆ ಬಳಸಿಕೊಳ್ಳುವ ದುರುದ್ದೇಶದಿಂದ ಅದನ್ನು ಬೆಳೆಯಬಿಡಲಾಗುತ್ತದೆ. ಇಂತಹ ಉದಾಸೀನ ಹಾಗೂ ಜನ ವಿರೋಧಿ ನಿಲುಮೆಗಳು, ಜಾಗತಿಕರಣ, ಉದಾರಿಕರಣ ಮತ್ತು ಖಾಸಗಿಕರಣದ ನೀತಿಗಳ ಭಾಗವಾಗಿವೆ ಎಂದಿದೆ ಎಂದು ಅವರು ಟೀಕಿಸಿದ್ದಾರೆ.

`ಎಲ್ಲ ಸಾರ್ವಜನಿಕ ರಂಗದ ಕುಡಿಯುವ ಹಾಗೂ ನೀರಾವರಿ ಯೋಜನೆಗಳನ್ನು ಮತ್ತು ಸಾರ್ವಜನಿಕ ರಂಗದ ವಿದ್ಯುತ್ ಉತ್ಪಾದನೆಯನ್ನು ಖಾಸಗಿಕರಣಕ್ಕೆ ಒಳಪಡಿಸುವ ದುರುದ್ದೇಶ ಹೊಂದಿರುವುದರಿಂದ, ಇಂತಹ ಸಾರ್ವಜನಿಕ ರಂಗದ ಕೆಲಸಗಳು ನನೆಗುದಿಗೆ ಬೀಳುವಂತಾಗಿವೆ. ಇಂತಹ ಖಾಸಗೀಕರಣದ ಯೋಚನೆ/ಯೋಜನೆಗಳನ್ನು ಒಕ್ಕೂಟ ಹಾಗು ರಾಜ್ಯ ಸರಕಾರಗಳು ಕೈಬಿಟ್ಟು ಸಾರ್ವಜನಿಕ ರಂಗದ ಯೋಜನೆಗಳು ರೂಪುಗೊಳ್ಳಲು ಅಗತ್ಯ ರಾಜಕೀಯ ಪರಿಹಾರ ಹುಡುಕಬೇಕು ಎಂದು ಸಿಪಿಎಂ  ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News