ಕೊಪ್ಪ: ಪೋಷಕರ ಸಭೆಯಲ್ಲಿ ಡ್ರೆಸ್‍ಕೋಡ್ ಉಲ್ಲಂಘನೆ ವಿರುದ್ಧ ಶಿಸ್ತುಕ್ರಮಕ್ಕೆ ನಿರ್ಣಯ

Update: 2022-01-12 19:02 GMT

ಚಿಕ್ಕಮಗಳೂರು, ಜ.12: ಜಿಲ್ಲೆಯ ಕೊಪ್ಪ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಭವಿಸಿದ್ದ ಸ್ಕಾರ್ಫ್-ಕೇಸರಿ ಶಾಲು ವಿವಾದಕ್ಕೆ ಬುಧವಾರ ತೆರೆಬಿದ್ದಿದೆ. ವಿವಾದ ಸಂಬಂಧ ಕಾಲೇಜಿನಲ್ಲಿ ಪೋಷಕರ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಸ್ಕಾರ್ಫ್ ಧರಿಸಲು ಯಾವುದೇ ವಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಈ ಹಿಂದಿನಂತೆಯೇ ಸಮವಸ್ತ್ರ ಧರಿಸಬೇಕೆಂದು ನಿರ್ಣಯ ಕೈಗೊಳ್ಳಲಗಿದೆ.

ಪಟ್ಟಣದ ಪದವಿ ಕಾಲೇಜಿನಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದನ್ನು ವಿರೋಧಿಸಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದು ಗೊಂದಲ ಸೃಷ್ಟಿಸಿ ಪ್ರತಿಭಟನೆಯನ್ನೂ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜು ಪ್ರಾಂಶುಪಾಲರು ಶಾಸಕ ಟಿ.ಡಿ.ರಾಜೇಗೌಡ ನೇತೃತ್ವದಲ್ಲಿ ಪೋಷಕರ ಸಭೆ ನಡೆಸಿದ್ದರು. ಸಭೆಯಲ್ಲಿ ಪೋಷಕರು ಹಿಜಾಬ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸದೇ ಕಾಲೇಜಿನ ಡ್ರೆಸ್‍ಕೋಡ್ ಉಲ್ಲಂಘಿಸುವ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದರು. ಅದರಂತೆ ಕಾಲೇಜು ಪ್ರಾಂಶುಪಾಲರು ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಹಾಲಿ ಡ್ರೆಸ್‍ಕೋಡ್ ಪಾಲಿಸಲು ಸೂಚಿಸಿ ಡ್ರೆಸ್‍ಕೋಡ್ ಉಲ್ಲಂಘಿಸುವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪದವಿ ಕಾಲೇಜಿನಲ್ಲಿ ಉದ್ಭವಿಸಿದ್ದ ವಿವಾದ ಸುಖಾಂತ್ಯ ಕಂಡಿತ್ತು.

ಪದವಿ ಕಾಲೇಜಿನ ಬಳಿಕ ಈ ವಿವಾದ ಪಟ್ಟಣದ ಪದವಿ ಪೂರ್ವ ಕಾಲೇಜಿಗೂ ಕಾಲಿಟ್ಟಿದ್ದು, ಈ ಸಮಸ್ಯೆ ಪರಿಹಾರಕ್ಕೆ ಕಾಲೇಜು ಪ್ರಾಂಶುಪಾಲರು ಜ.12ರಂದು ಪೋಷಕರ ಸಭೆ ನಡೆಸಲು ತೀರ್ಮಾನಿಸಿದ್ದರು. ಈ ಮಧ್ಯೆ ಜ.11ರಂದು ಮಂಗಳವಾರ ಇದೇ ವಿವಾದ ಸಂಬಂಧ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದು ಪ್ರಕರಣ ಕೊಪ್ಪ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. 

ಬುಧವಾರ ಸ್ಕಾರ್ಫ್-ಕೇಸರಿ ಶಾಲು ವಿವಾದ ಸಂಬಂಧ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ವಕೀಲ ವಿಕ್ರಮ್ ನಿಗಾಳೆ ನೇತೃತ್ವದಲ್ಲಿ ಪ್ರಾಂಶುಪಾಲರು ಪೋಷಕರ ಸಭೆ ನಡೆಸಿದ್ದು, ಸಭೆಯಲ್ಲಿ ಸ್ಕಾರ್ಫ್ ಸಂಬಂಧ ಯಾವುದೇ ಪೋಷಕರು ದೂರು ಹೇಳದೇ ಕಾಲೇಜಿನಲ್ಲಿ ಈ ಹಿಂದೆ ಇದ್ದ ಡ್ರೆಸ್‍ಕೋಡ್‍ಗೆ ಸಹಮತ ವ್ಯಕ್ತಪಡಿಸಿದ್ದರಿಂದ ಹಾಲಿ ಡ್ರೆಸ್‍ಕೋಡ್ ಪಾಲನೆಗೆ ನಿರ್ಣಯಿಸಲಾಯಿತು ಎಂದು ತಿಳಿದು ಬಂದಿದೆ.

ಕಾಲೇಜು ಡ್ರೆಸ್‍ಕೋಡ್ ಸಂಬಂಧ ಗೊಂದಲ ಸೃಷ್ಟಿಸುವ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಿಲಾಗಿದೆ ಎಂದು ತಿಳಿದು ಬಂದಿದ್ದು, ಈ ಮೂಲಕ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲೂ ಉದ್ಭವಿಸಿದ್ದ ಸ್ಕಾಫ್, ಕೇಸರಿ ಶಾಲು ವಿವಾದಕ್ಕೆ ತೆರೆ ಬಿದ್ದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News