ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ: ಸಂಶೋಧಕರು
ಬೆಂಗಳೂರು: ಜನವರಿ ಕೊನೆ ಅಥವಾ ಫೆ. 2ರ ವೇಳೆಗೆ ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗುವ ಕೋವಿಡ್-19 ಸೋಂಕಿತರ ಸಂಖ್ಯೆ 20 ಸಾವಿರದಿಂದ 70 ಸಾವಿರ ಆಗಲಿದೆ ಎಂದು ಅಂದಾಜಿಸಲಾಗಿದೆ.
ಇಂಡಿಯನ್ ಸ್ಟೆಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಶೋಧಕರು ಈ ಅಂದಾಜು ಮಾಡಿದ್ದಾರೆ. ಅಂತೆಯೇ ಐಸಿಯು ಬೆಡ್ ಅಗತ್ಯತೆಯ ಸಂಖ್ಯೆ ಫೆಬ್ರುವರಿ 2ರ ವೇಳೆಗೆ ಒಂದು ಸಾವಿರದಿಂದ ಮೂರು ಸಾವಿರ ಆಗಲಿದೆ ಎಂದು ಅಂದಾಜಿಸಿದ್ದಾರೆ.
ಐಎನ್‌ಡಿಎಸ್‌ಸಿಐ-ಎಸ್‌ಐಎಂ ವಿಜ್ಞಾನಿಗಳ ಅಂದಾಜಿನ ಪ್ರಕಾರ ಜನವರಿ 25ರ ವೇಳೆಗೆ ರಾಜ್ಯದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ 35 ಸಾವಿರವನ್ನು ತಲುಪಲಿದ್ದು, ಈ ಪೈಕಿ 500-5000 ತೀವ್ರ ಪ್ರಕರಣಗಳು ಇರುತ್ತವೆ.
ಹರ್ಯಾಣದ ಅಶೋಕ ವಿವಿಯ ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ವಿಭಾಗದ ಪ್ರೊ. ಗೌತಮ್ ಮೆನನ್ ಅವರ ಪ್ರಕಾರ, "ಜನವರಿ 21 ರಿಂದ ಫೆಬ್ರುವರಿ 10ರ ನಡುವೆ ದೇಶದಲ್ಲಿ ಕೋವಿಡ್ ಅಲೆ ಉತ್ತುಂಗಕ್ಕೇರಲಿದ್ದು, ಈ ಅವಧಿಯಲ್ಲಿ ದೈನಿಕ ಆರು ಲಕ್ಷದಿಂದ ಒಂಬತ್ತು ಲಕ್ಷ ಕೋವಿಡ್-19 ಪ್ರಕರಣಗಳು ವರದಿಯಾಗಲಿವೆ. ಮಾರ್ಚ್ ವೇಳೆಗೆ ಅಲೆಯ ತೀವ್ರತೆ ತಗ್ಗಲಿದೆ. ಒಟ್ಟಾರೆಯಾಗಿ ಎರಡನೇ ಅಲೆಗೆ ಹೋಲಿಸಿದರೆ ಒಟ್ಟು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ"
ಇದುವರೆಗೆ ಲಸಿಕೆ ಪಡೆಯದಿರುವವರು ಅಥವಾ ಒಂದು ಬಾರಿ ಲಸಿಕೆ ಪಡೆದಿರುವವರು ಸೋಂಕಿಗೆ ತುತ್ತಾಗುವ ಸಾಧ್ಯತೆ ಅಧಿಕ ಎಂದು ಐಎನ್‌ಡಿಎಸ್‌ಸಿಐ-ಎಸ್‌ಐಎಂ ಮಾದರಿ ಅಧ್ಯಯನದಲ್ಲಿ ಹೇಳಲಾಗಿದೆ. ಈ ವರ್ಗ ಶೇಕಡ 20ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಒಂದು ಬಾರಿ ಸೋಂಕಿಗೆ ತುತ್ತಾಗಿರುವವರೂ ಮತ್ತೆ ಸೋಂಕಿತರಾಗುವ ಸಾಧ್ಯತೆ ಇದೆ.