×
Ad

ಎಸಿಬಿ ದಾಳಿ ನೆಪದಲ್ಲಿ ಶಾಸಕ ಕೆ.ಜಿ.ಬೋಪಯ್ಯಗೆ ಬ್ಲ್ಯಾಕ್ ಮೇಲ್ ಪ್ರಕರಣ: ಆರೋಪಿಯ ಬಂಧನ

Update: 2022-01-13 15:35 IST
ಆನಂದ

ಮಡಿಕೇರಿ ಜ.13 : ಎಸಿಬಿ ದಾಳಿ ನೆಪದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಕರೆ ಮಾಡಿ 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ತುಮಕೂರು ಜಿಲ್ಲೆಯ ಕೊರಟಗೆರೆ ನಿವಾಸಿ ಆನಂದ (31) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ರೌಡಿ ಶೀಟರ್ ಎಂದು ತಿಳಿದು ಬಂದಿದೆ.

ಕಳೆದ ವಾರ ಬೋಪಯ್ಯ ಅವರಿಗೆ ಮೊಬೈಲ್ ಕರೆ ಮಾಡಿದ್ದ ವ್ಯಕ್ತಿ “ನಿಮ್ಮ ಮನೆಯಲ್ಲಿ ಹಣ ಇರುವ ಬಗ್ಗೆ ಮಾಹಿತಿ ಇದೆ, ನಾನು ಎಸಿಬಿ ಅಧಿಕಾರಿ. ದಾಳಿ ಮಾಡಬಾರದೆಂದಿದ್ದರೆ 1 ಕೋಟಿ ರೂ. ನನ್ನ ಖಾತೆಗೆ ಜಮಾ ಮಾಡಿ” ಎಂದು ತಿಳಿಸಿದ್ದ. 

ದಾಳಿ ಮಾಡುವುದಾದರೆ ಮಾಡಿ ಎಂದು ಹೇಳಿದ ಬೋಪಯ್ಯ ಅವರು ಸಂಶಯಗೊಂಡು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರ ತಂಡ ಮೊಬೈಲ್ ಲೊಕೇಶನ್ ಆಧರಿಸಿ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಆನಂದನನ್ನು ಬಂಧಿಸಿದರು. ಆಂಧ್ರ ಗಡಿಯಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಈತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಎಸಿಬಿ ದಾಳಿ ನೆಪದಲ್ಲಿ ಶಾಸಕ ಕೆ.ಜಿ.ಬೋಪಯ್ಯಗೆ 1 ಕೋಟಿ ರೂ. ಬೇಡಿಕೆ: ಅನಾಮಧೇಯ ವ್ಯಕ್ತಿ ವಿರುದ್ಧ ದೂರು

ವಿಚಾರಣೆ ವೇಳೆ ಆನಂದ ರೌಡಿ ಶೀಟರ್ ಎಂದು ತಿಳಿದು ಬಂದಿದೆ. ತನಿಖೆ ಮುಂದುವರಿದಿದ್ದು, ಮತ್ತಷ್ಟು ಪ್ರಕರಣಗಳು ಬಯಲಾಗುವ ಸಾಧ್ಯತೆಗಳಿದೆ.

ಅಪರಾಧ ಪತ್ತೆದಳದ ಠಾಣಾಧಿಕಾರಿ ಮೋಹನ್ ರಾಜ್, ಸಿಬ್ಬಂದಿಗಳಾದ ವಸಂತ್, ನಾಗರಾಜ್, ನಂದಕುಮಾರ್ ಮತ್ತಿತರ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News