×
Ad

ಶೃಂಗೇರಿ: ತಹಶೀಲ್ದಾರ್, ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ ಬಿದ್ದ ಪ್ರಕರಣ; ಮೂವರು ಅಧಿಕಾರಿಗಳು ಅಮಾನತು

Update: 2022-01-13 20:44 IST
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಜ.13: ಲಂಚ ಪ್ರಕರಣದಲ್ಲಿ ಜಿಲ್ಲೆಯ ಶೃಂಗೇರಿ ತಾಲೂಕು ಕಚೇರಿಯ ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ ಬಿದ್ದು, ಜೈಲು ಪಾಲಾಗಿರುವ ಘಟನೆ ಬೆನ್ನಲ್ಲೆ ತಾಲೂಕಿನಲ್ಲಿ ಕರ್ತವ್ಯ ಲೋಪ ಆರೋಪದಡಿಯಲ್ಲಿ ಮತ್ತೆ ಮೂವರು ಕಂದಾಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವ ಘಟನೆ ವರದಿಯಾಗಿದೆ.

ತಾಲೂಕಿನ ಕಂದಾಯ ಇಲಾಖೆ ಕಸಬಾ ಹೋಬಳಿ ರಾಜಸ್ವ ನಿರೀಕ್ಷ ಎಂ.ಆರ್.ಸಂದೀಪ್, ವಿದ್ಯಾರಣ್ಯಪುರ ಕಂದಾಯ ವೃತ್ತದ ಗ್ರಾಮ ಲೆಕ್ಕಿಗ ಕೆ.ಆರ್.ಸತೀಶ್, ಕಾವಡಿ ಕಂದಾಯ ವೃತ್ತದ ವಿ.ಶಿವಕುಮಾರ್ ಅಮಾನತುಗೊಂಡಿರುವ ಕಂದಾಯ ಇಲಾಖೆ ಅಧಿಕಾರಿಗಳಾಗಿದ್ದು, ಈ ಮೂವರನ್ನು 94ಸಿ ಅಡಿಯಲಿ ಸಲ್ಲಿಕೆಯಾದ ಅರ್ಜಿಗಳಿಗೆ ನಿಯಮ ಉಲ್ಲಂಘಿಸಿ ಹಕ್ಕುಪತ್ರ ನೀಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಮನೆ ನಿವೇಶನಕ್ಕೆ ಹಕ್ಕುಪತ್ರ ನೀಡಲು ಲಂಚ ಸ್ವೀಕರಿಸಿದ್ದ ಪ್ರಕರಣದಲ್ಲಿ ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದರಿರುವ ಶೃಂಗೇರಿ ತಹಶೀಲ್ದಾರ್ ಅಂಬುಜಾ ಹಾಗೂ ಗ್ರಾಮಲೆಕ್ಕಿಗ ಸಿದ್ದಪ್ಪ ಎಂಬವರು ಜೈಲು ಪಾಲಾದ ಘಟನೆ ಬಳಿಕ ಜಿಲ್ಲಾಧಿಕಾರಿ ರಮೇಶ್, ಅಕ್ರಮದ ಬಗ್ಗೆ ತನಿಖೆಕೈಗೊಳ್ಳಲು ಕಂದಾಯ ಉಪವಿಭಾಗಾಧಿಕಾರಿ ನಾಗರಾಜ್ ಅವರನ್ನು ನೇಮಿಸಿದ್ದರು. ಈ ಅಧಿಕಾರಿ ಶೃಂಗೇರಿ ತಾಲೂಕು ಕಚೇರಿಗೆ ಖುದ್ದು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದ ವೇಳೆ ಸದ್ಯ ಅಮಾನತುಗೊಂಡಿರುವ ಕಂದಾಯ ಅಧಿಕಾರಿಗಳು ಅರಣ್ಯ ಜಾಗಕ್ಕೆ ಹಕ್ಕುಪತ್ರ ನೀಡಿರುವುದು, ಒಂದೇ ಕುಟುಂಬದ ಹಲವರಿಗೆ ಹಕ್ಕುಪತ್ರ ವಿತರಿಸಿರುವುದು ಹಾಗೂ ಖಾಲಿ ಜಾಗಕ್ಕೂ ಹಕ್ಕುಪತ್ರ ನೀಡಿರುವುದು ದಾಖಲೆಗಳಿಂದ ಬಟಾ ಬಯಲಾಗಿತ್ತು. ಈ ಸಂಬಂಧ ತನಿಖಾಧಿಕಾರಿ ಈ ಮೂವರನ್ನು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾಗ ಮೂವರು ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ತಿಳಿದು ಬಂದಿದ್ದು, ಈ ಸಂಬಂಧ ತನಿಖಾಧಿಕಾರಿ ಸಲ್ಲಿಸಿದ್ದ ವರದಿ ಆಧರಿಸಿ ಜಿಲ್ಲಾಧಿಕಾರಿ ಇಬ್ಬರು ಗ್ರಾಮ ಲೆಕ್ಕಾಧಿಕಾರಿ ಹಾಗೂ ಓರ್ವ ರಾಜಸ್ವ ನಿರೀಕ್ಷಕನನ್ನು ಅಮಾನತು ಮಾಡಿ ಆದೇಶಿಸಿದ್ದಾರೆಂದು ತಿಳಿದು ಬಂದಿದೆ.

ಶೃಂಗೇರಿ ತಾಲೂಕಿನಲ್ಲಿ 94ಸಿ ಹಕ್ಕುಪತ್ರ ವಿತರಣೆ ಸಂಬಂಧ ಆರಂಭದಿಂದಲೂ ಆರೋಪಗಳು ಕೇಳಿ ಬಂದಿದ್ದು, ಇತ್ತೀಚೆಗೆ ಹಕ್ಕುಪತ್ರ ವಿತರಣೆಗೆ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದಾಗ ತಹಶೀಲ್ದಾರ್ ಅಂಬುಜಾ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ತಹಶೀಲ್ದಾರ್ ಅವರನ್ನು ಎ1 ಆರೋಪಿಯಾಗಿದ್ದು, ಗ್ರಾಮಲೆಕ್ಕಾಧಿಕಾರಿ ಎ3 ಆರೋಪಿಯನ್ನಾಗಿಸಿದ್ದ ಎಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರಿಂದ ಆರೋಪಿಗಳಿಗೆ ನ್ಯಾಯಾಂಗ ಬಂಧನವಾಗಿತ್ತು. ಈ ಘಟನೆಯ ಬಳಿಕ ನಿಯಮ ಉಲ್ಲಂಘಿಸಿ 94ಸಿ ಹಕ್ಕುಪತ್ರ ವಿತರಣೆ ಮಾಡಿರುವ ಹಿನ್ನೆಲೆಯಲ್ಲಿ ಮತ್ತೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಈ ಮಧ್ಯೆ ಈ ಅಧಿಕಾರಿಗಳಿಂದ ಈಗಾಗಲೇ ಹಕ್ಕುಪತ್ರ ಪಡೆದಿರುವ ನೂರಾರು ಜನರು ಆತಂಕಕ್ಕೊಳಗಾಗಿದ್ದು, ತಾವು ಪಡೆದ ಹಕ್ಕುಪತ್ರ ಎಲ್ಲಿ ರದ್ದಾಗಲಿದೆಯೋ ಎಂಬ ಭೀತಿಯಲ್ಲಿದ್ದಾರೆ. ಅಲ್ಲದೇ ಕೆಲ ರಾಜಕೀಯ ಪಕ್ಷಗಳ ಮುಖಂಡರು ತಾಲೂಕಿನಲ್ಲಿ ಈಗಾಗಲೆ ವಿತರಣೆಯಾಗಿರುವ ಹಕ್ಕುಪತ್ರಗಳನ್ನು ರದ್ದುಪಡಿಸಬಾರದು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಜಿಲ್ಲಾಧಿಕಾರಿ ಯಾವ ಕ್ರಮಕೈಗೊಳ್ಳಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News