ಸಿಮೆಂಟ್ ಲಾರಿ ತಡೆದು ದರೋಡೆ: ಆರೋಪಿಗಳಿಗೆ 8 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Update: 2022-01-14 18:53 GMT

ಕಲಬುರಗಿ, ಜ.14: ಸಿಮೆಂಟ್ ಚೀಲಗಳನ್ನು ತುಂಬಿದ್ದ ಲಾರಿಯನ್ನು ಕಲಬುರಗಿ ನಗರದಲ್ಲಿ ತಡೆದು ದರೋಡೆ ಮಾಡಿದ ಮೂರು ಜನ ಆರೋಪಿಗಳಿಗೆ ಕಲಬುರಗಿ 3ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 8 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು ತಲಾ 15 ಸಾವಿರ ರೂ.ಗಳ ದಂಡವನ್ನು ವಿಧಿಸಿದೆ.

ಕಲಬುರಗಿ ನಗರದ ನೃಪತುಂಗ ಬಡಾವಣೆಯ ಕೇಂಬ್ರಿಡ್ಜ್ ಶಾಲೆಯ ಹತ್ತಿರ ಸಿಮೆಂಟ್ ಲಾರಿ ಚಾಲಕ ಮಹೇಶ ಲಕ್ಷ್ಮಣ ನಾರಾಯಣಪೂರ ಅವರನ್ನು 2013ರಂದು ನ.19ರ ರಾತ್ರಿ ತಡೆದು ಆತನನ್ನು ಅಪಹರಣ ಮಾಡಿದ ಮಹಮ್ಮದ ವಸೀಮ, ಸೈಯದ ವಸೀಂ ಹಾಗೂ ಸದರತ ಅಲಿ ಈ ಮೂರು ಜನರು ಸೇರಿ ಆತನ ಮೇಲೆ ಹಲ್ಲೆ ನಡೆಸಿ 4 ಸಾವಿರ ರೂ.ಗಳನ್ನು ಹಾಗೂ ಮೊಬೈಲ್ ಹಾಗೂ ಲಾರಿಯಲ್ಲಿನ ಸಿಮೆಂಟ್ ಚೀಲಗಳನ್ನು ದೋಚಿಕೊಂಡು, ಚಾಲಕ ಮಹೇಶನನ್ನು ಸಾವಳಗಿ ಬಳಿ ಬಿಟ್ಟು ಪರಾರಿಯಾಗಿದ್ದರು.

ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 

ವಕೀಲರ ವಾದ ಆಲಿಸಿದ ನ್ಯಾಯಾಧಿಶ ಜಗದೀಶ ವ್ಹಿ.ಎನ್ ಅವರು, ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಯಲ್ಲಿ ಈ ಮೂರು ಜನ ಆರೋಪಿಗಳಿಗೆ 8 ವರ್ಷಗಳ ಕಾಲ ಜೈಲು ಶಿಕ್ಷೆ, ತಲಾ 15 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ದಂಡದ ಹಣದಲ್ಲಿ 25 ಸಾವಿರ ರೂ.ಗಳನ್ನು ದೂರುದಾರನಿಗೆ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News