ಹನೂರು: ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದಿಂದ ವಸತಿಗೃಹದಲ್ಲಿದ್ದ ಕುಟುಂಬದ ಏಕಾಏಕಿ ತೆರವು: ಆರೋಪ
ಹನೂರು, ಜ.15: ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಯೊಬ್ಬರು ನಿಧನರಾದ ಬಳಿಕವೂ ಪ್ರಾಧಿಕಾರದ ಖಾಯಂ ವಸತಿ ಗೃಹದಲ್ಲಿ ವಾಸವಿದ್ದ ಕಾರಣಕ್ಕೆ ಕುಟುಂಬವೊಂದನ್ನು ರಾತ್ರಿ ವೇಳೆ ತೆರವುಗೊಳಿಸಿ ಮನೆ ಸಾಮಗ್ರಿಗಳನ್ನೆಲ್ಲ ಬೀದಿಗೆ ತಂದಿಟ್ಟ ಘಟನೆ ಶುಕ್ರವಾರ ನಡೆದಿದೆ.
ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಯಾಗಿದ್ದ ಜಯಸ್ವಾಮಿ 2019ರಲ್ಲಿ ಅನಾರೋಗ್ಯಕ್ಕೀಡಾಗಿ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ವಾಸವಿದ್ದ ಪ್ರಾಧಿಕಾರದ ಖಾಯಂ ವಸತಿ ಗೃಹದಿಂದ ಮನೆ ಖಾಲಿ ಮಾಡಲು ಪ್ರಾಧಿಕಾರ ಸೂಚಿಸಿ ಕಾಲಾವಕಾಶ ನೀಡಿತೆನ್ನಲಾಗಿದೆ. ಆದರೆ ಜಯಸ್ವಾಮಿ ನಿಧನದ ಬಳಿ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ನಮಗೆ ಸ್ವಂತ ಮನೆ, ಜಾಗ ಇಲ್ಲವಾಗಿದೆ. ಆದ್ದರಿಂದ ಅಪ್ಪನ ಪಿಎಫ್ ಸೇರಿದಂತೆ ಎಲ್ಲ ಕ್ಲೇಮ್ ಗಳನ್ನು ಸರಿಪಡಿಸಿಕೊಡಿ. ಅನುಕಂಪದ ಆಧಾರದಲ್ಲಿ ತನಗೊಂದು ಉದ್ಯೋಗಾವಕಾಶ ಕಲ್ಪಿಸಿ. ಆ ಬಳಿಕ ಬೇರೆ ಮನೆ ಮಾಡಿಕೊಂಡು ಮನೆ ಖಾಲಿ ಮಾಡುತ್ತೇವೆ ಎಂದು ಜಯಸ್ವಾಮಿಯವರ ಪುತ್ರ ಶಾಂತ ಮಲ್ಲೇಶ್ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಪ್ರಾಧಿಕಾರದ ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಅವರು ದೂರಿಕೊಂಡಿದ್ದಾರೆ.
ಆದರೆ ಕಳೆದ ರಾತ್ರಿ ವೇಳೆ ಪ್ರಾಧಿಕಾರದ ಅಧಿಕಾರಿಗಳು ಜಯಸ್ವಾಮಿ ಕುಟುಂಬ ವಾಸವಿದ್ದ ಪ್ರಾಧಿಕಾರದ ಖಾಯಂ ವಸತಿ ಗೃಹವನ್ನು ಖಾಲಿ ಮಾಡಿಸಿದ್ದಾರೆ. ಮನೆಮಂದಿಯ ವಿರೋಧವನ್ನು ಲೆಕ್ಕಿಸದೆ ರಾತ್ರಿಯೇ ಮನೆ ಸಾಮಗ್ರಿಗಳನ್ನೆಲ್ಲ ಬೀದಿಯಲ್ಲಿಟ್ಟು ಮನೆಗೆ ಬೀಗಮುದ್ರೆ ಹಾಕಿದ್ದಾರೆ. ಈ ವೇಳೆ ಮನೆಮಂದಿ ಬೀದಿಯಲ್ಲಿ ಕಣ್ಣೀರಿಡುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.
ತೆರವಿಗೆ ಕಾಲಾವಕಾಶ ನೀಡಲಾಗಿತ್ತು: ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ
ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ನೌಕರರಾಗಿದ್ದ ಜಯಸ್ವಾಮಿ ಎಂಬುವವರು 2019ರಲ್ಲಿ ನಿಧನ ಹೊಂದಿದ್ದಾರೆ. ಬಳಿಕ ಅವರ ವಾರಸುದಾರರು ಪ್ರಾಧಿಕಾರದ ಖಾಯಂ ವಸತಿ ಗೃಹದಲ್ಲಿ ಅವಧಿಗೂ ಮೀರಿ ವಾಸವಿದ್ದ ಪ್ರಯುಕ್ತ 2019ರಲ್ಲೇ Public premises eviction act ಅಡಿಯಲ್ಲಿ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ನಿಯಮಾನುಸಾರ 45 ದಿನಗಳ ಕಾಲಾವಕಾಶ ನೀಡಿ ಮನೆ ತೆರವಿಗೆ ಆದೇಶ ಹೊರಡಿಸಿ ವಾರಸುದಾರರಿಗೆ ಆಗಸ್ಟ್ 2021ರಲ್ಲಿ ಜಾರಿ ಮಾಡಲಾಗಿತ್ತು ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
45 ದಿನಗಳೊಳಗೆ ವಾರಸುದಾರರು ಅನಧಿಕೃತವಾಗಿ ವಾಸವಿದ್ದ ಪ್ರಾಧಿಕಾರದ ಖಾಯಂ ವಸತಿ ಗೃಹವನ್ನು ತೆರವುಗೊಳಿಸಿಲ್ಲ. ತೆರವಿಗೆ ನೀಡಿದ್ದ ಕಾಲಾವಕಾಶ ಮುಗಿದಿರುವ ಹಿನ್ನೆಲೆಯಲ್ಲಿ ಜ.14ರ ಸಂಜೆ 5:30ರಿಂದ ಮನೆ ತೆರವು ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಆದರೆ ಮನೆಮಂದಿ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ತೆರವು ಕಾರ್ಯಾಚರಣೆಗೆ ಹೆಚ್ಚಿನ ಸಮಯ ಹಿಡಿಯಿತು ಎಂದು ಸ್ಪಷ್ಟಪಡಿಸಿದ್ದಾರೆ.
ಆದೇಶ ಹೊರಡಿಸಿ ಸಾಕಷ್ಟು ಕಾಲಾವಕಾಶ ನೀಡಿದರೂ ಸ್ವಯಂ ತೆರವುಗೊಳಿಸದ ಪ್ರಯುಕ್ತ ಪ್ರಾಧಿಕಾರದ ವತಿಯಿಂದ ತೆರವುಗೊಳಿಸಿ ಮನೆಗೆ ಬೀಗಮುದ್ರೆ ಹಾಕಲಾಗಿದೆ ಎಂದವರು ಹೇಳಿದ್ದಾರೆ.