ಸಿಎಂ‌ ಹೊರತುಪಡಿಸಿ ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟ ರಚನೆಯಾಗಬೇಕು: ಶಾಸಕ ಎಂ.ಪಿ.ರೇಣುಕಾಚಾರ್ಯ

Update: 2022-01-15 12:07 GMT

ದಾವಣಗೆರೆ: ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಹೊರತು ಪಡಿಸಿ ಸಚಿವ ಸಂಪುಟದಲ್ಲಿ ಗುಜರಾತ್ ಮಾದರಿಯಲ್ಲಿ ರಚನೆಯಾಗಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಈ ಹಿಂದೆ 2006 , 2013ರಿಂದ 2018 ಹಾಗೂ ಪ್ರಸ್ತುತ ಸಂಪುಟದಲ್ಲಿ ಸಚಿವರಾದವರೇ ಸಚಿವರಾಗುತ್ತಿದ್ದು, ಅವರು ರಾಜಿನಾಮೆ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿ.ಪಕ್ಷ ನಿಷ್ಠೆ ಹಾಗೂ ಹೊಸಬರಿಗೆ ಒಂದು ಅವಕಾಶ ಕೊಟ್ಟರೆ ತಪ್ಪೇನು?'' ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ.ಇದರಿಂದಾಗಿ ನಮ್ಮ ನಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಈ ಹಿನ್ನೆಲೆಯಲ್ಲಿ ರಾಜ್ಯ  ಮತ್ತು  ಕ್ಷೇತ್ರದ ಅಭಿವೃದ್ಧಿಗಾಗಿ ಜನರು ನನಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತಿದ್ದು   ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ ಎಂದು ಹೇಳಿದರು.

ಪಕ್ಷ ನನಗೆ ತಾಯಿ ಸಮಾನ, ಪಕ್ಷಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದ ಅವರು, ಸಚಿವ ‌ಸಂಪುಟ ವಿಸ್ತರಣೆ ಕುರಿತಾಗಿ ನಾನು ಹಾದಿ ಬೀದಿಯಲ್ಲಿ ಮಾತನಾಡುವುದಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದರು.

ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಶಾಸಕಾಂಗ ಸಭೆಯಲ್ಲೇ ಕೇಳಿದ್ದೇನೆ. ಇನ್ನು ಮುಂದೆ ಹಾದಿ ಬೀದಿಯಲ್ಲಿ ಮಾತನಾಡದೆ ನಾಲ್ಕು ಗೋಡೆಗಳ ಮಧ್ಯೆ ಮಾತನಾಡುವೆ ಎಂದು ತಿಳಿಸಿದರು.

ನಾನು ಸಚಿವ ಸ್ಥಾನದ ಬಗ್ಗೆ ವೈರಾಗ್ಯದ ಮಾತುಗಳನ್ನಾಡಿಲ್ಲ, ಹೊಸಬರಿಗೆ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ.‌ ಸರ್ಕಾರ ಹಾಗೂ ಸಂಘಟನೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯಾವುದೇ ಕಾರಣಕ್ಕೂ ಬಂಡಾಯದ ಪ್ರಶ್ನೇಯೇ ಇಲ್ಲ, ಈ ಹಿಂದೆ ರೆಸಾರ್ಟ್‌ ರಾಜಕೀಯ ಮಾಡಿ ತಪ್ಪು ಮಾಡಿದ್ದೇನೆ. ಮುಂದೆ ನಾನು ಅಂತಹ ತಪ್ಪನ್ನು  ಮಾಡುವುದಿಲ್ಲಾ.ಎಲ್ಲಿ ಏನು ಹೇಳಬೇಕೋ ಅಲ್ಲಿಯೇ ಹೇಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಎಂಬುದು ಸಣ್ಣ ಮಕ್ಕಳ ಅಟದ ಗೊಂಬೆಯಂತಾಗಿದೆ. ನನಗೂ ಒಂದು ಕಾರು, ಮನೆ ಕೊಟ್ಟಿದ್ದಾರೆ. ಆದರೆ ನನಗೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ‌ರೇಣುಕಾಚಾರ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News