ಡೆತ್ ನೋಟ್ ಬರೆದಿಟ್ಟು ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Update: 2022-01-15 13:02 GMT
 ವೀಣಾ- ಮೃತ ಮಹಿಳೆ

ಶಿವಮೊಗ್ಗ, ಜ.15: ಮಹಿಳೆಯೋರ್ವರು ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಭದ್ರಾವತಿಯ ಹಂಚಿನ ಸಿದ್ದಾಪುರದಲ್ಲಿ ಶನಿವಾರ ನಡೆದಿದೆ.

ಭದ್ರಾವತಿ ತಾಲೂಕಿನ ಯಡೇಹಳ್ಳಿಯ ನಿವಾಸಿ ವೀಣಾ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡವರು.

ವೀಣಾ ಹಾಗೂ ಸಂತೋಷ್ ದಂಪತಿಯು ಭದ್ರಾವತಿ ತಾಲೂಕಿನ ಅರಹತೋಳಲು ಗ್ರಾಮದ ಸಂತೋಷ ಹಾಗೂ ಆಶಾ ಎಂಬುವರಿಗೆ 8 ಲಕ್ಷ ರೂ. ಸಾಲ ನೀಡಿದ್ದರು. ಈ ಸಾಲ ವಾಪಸ್​ ನೀಡುವಂತೆ ಕೇಳಿದ್ದಕ್ಕೆ ಆಶಾ ಹಾಗೂ ಸಂತೋಷ್ ದಂಪತಿಯು ವೀಣಾ ಅಕ್ರಮ‌ ಸಂಬಂಧ ಹೊಂದಿದ್ದಾರೆ ಎಂದು ಅಪಪ್ರಚಾರ ನಡೆಸಿದ್ದಾರೆ ಎನ್ನಲಾಗ್ತಿದೆ.

ಇದರಿಂದ ಬೇಸತ್ತ ವೀಣಾ 7 ವರ್ಷದ ಮಗಳಾದ ಜ್ಞಾನವಿ ಹಾಗೂ ಒಂದು ವರ್ಷದ ದೈವಿಕಾ ಎಂಬ ಇಬ್ಬರು ಹೆಣ್ಣು‌ ಮಕ್ಕಳೊಂದಿಗೆ ಹಂಚಿನ ಸಿದ್ದಾಪುರ ಗ್ರಾಮದ ಬಳಿಯ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜ.13ರಂದು ವೀಣಾ ತನ್ನ ಮಕ್ಕಳೊಂದಿಗೆ ತವರು ಮನೆಯಾದ ಹೊಳಲ್ಕೆರೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು ಎಂದು ಹೇಳಲಾಗಿದೆ.

ವೀಣಾ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ನಾಲೆಯ ದಡದ ಮೇಲೆಯೇ ಬ್ಯಾಗ್ ಇಟ್ಟಿದ್ದಾರೆ.‌ ವೀಣಾ ಮೃತದೇಹವು ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಬಳಿ ಹಾಗೂ ಜ್ಞಾನವಿ ಮೃತದೇಹ ಚನ್ನಗಿರಿ ತಾಲೂಕಿನ ನಲ್ಲೂರು ಸಮೀಪ ಪತ್ತೆಯಾಗಿದ್ದು, ದೈವಿಕಾಳ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ಕುರಿತು ಮೃತ ವೀಣಾ ಪತಿ ಸಂತೋಷ್ ನೀಡಿದ ದೂರಿನ ಮೇರೆಗೆ ಅರಹತೋಳಲು ಗ್ರಾಮದ ಸಂತೋಷ್(35) ನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಆದರೆ ಆಶಾ ಪರಾರಿಯಾಗಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News