ಸಕಲೇಶಪುರ: ಹೋಟೆಲ್‌ನಲ್ಲಿ ದನದ ಮಾಂಸ ನೀಡಿದ್ದಾರೆಂದ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ; ಆರೋಪ

Update: 2022-01-16 11:25 GMT
ಸಾಂದರ್ಭಿಕ ಚಿತ್ರ

ಸಕಲೇಶಪುರ : ಹೋಟೆಲ್‌ನಲ್ಲಿ ಗೋಮಾಂಸದ ಆಹಾರ ನೀಡಿದ್ದಾರೆ ಎಂದು ಆರೋಪಿಸಿದ ಬಜರಂಗದಳದ ಕಾರ್ಯಕರ್ತನೋರ್ವನಿಗೆ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಮೂವರ ಮೇಲೆ ಪ್ರಕರಣ ದಾಖಲಾಗಿದೆ. 

ಶಿವು ಗಾಯಗೊಂಡಿರುವ ಬಜರಂಗದಳದ ಕಾರ್ಯಕರ್ತನಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಣಿ ಮಂಗಳೂರಿನ ಸಫ್ವಾನ್,  ಸಲೀಂ, ಅಬ್ದುಲ್ ಜಬ್ಬಾರ್ ಸೇರಿದಂತೆ ಏಳು ಜನರ ಮೇಲೆ ಪ್ರಕರಣ ದಾಖಲಾಗಿದೆ.

ಶನಿವಾರ ಸಂಜೆ ತಾಲೂಕಿನ ಮಾರನಹಳ್ಳಿ ಸಮೀಪದ ಹೆದ್ದಾರಿಯಲ್ಲಿರುವ ಹೋಟೆಲಿನಲ್ಲಿ ಶಿವು  ಎಂಬ ವ್ಯಕ್ತಿ ಊಟಕ್ಕೆ ಕೂತು 
ಮಾಂಸದ ಊಟವನ್ನೂ ಅರ್ಡರ್  ಮಾಡಿದಾಗ ಇವನಿಗೆ ದನದ ಮಾಂಸ  ನೀಡಲಾಯಿತು.  ಇದನ್ನು  ತಿನ್ನುವುದಿಲ್ಲ ಎಂದು ನಿರಾಕರಿದಾಗ  ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ಮೇಲೆ ಐಪಿಸಿ ಕಲಂ 143/147/149/504/323/342/13 ಹಾಗೂ ದಲಿತ ದೌರ್ಜನ್ಯ ಕಾಯ್ದೆ  ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಸಂಘ ಪರಿವಾರದ ಕಾರ್ಯಕರ್ತರ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಿ ಹೋಟೆಲ್ ನ ಮೂವರು ಸಿಬ್ಬಂದಿಗಳು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಇದು ಸುಳ್ಳು ಪ್ರಕರಣ: 

ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲಿನ ಕಟ್ಟಡದ ಮಾಲಕ ಅಶ್ರಫ್ ಪತ್ರಿಕೆಯೊಂದಿಗೆ ಮಾತನಾಡಿ ಇದೊಂದು ಸುಳ್ಳು ಪ್ರಕರಣವಾಗಿದ್ದು,  ಹೋಟೆಲಿನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿರಲಿಲ್ಲ, ಎರಡು ತಿಂಗಳ ಹಿಂದೆ ಬಾಡಿಗೆಗೆ ನೀಡಿದ್ದೆ. ದುರುದ್ದೇಶದಿಂದ ಬಜರಂಗದಳದ ಕಾರ್ಯಕರ್ತರು ಹೋಟೆಲಿಗೆ ನುಗ್ಗಿ ದಾಂಧಲೆ ನಡೆಸಿ ದಲಿತ ದೌರ್ಜನ್ಯದ ಕಾಯ್ದೆಯಡಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಮುಸ್ಲಿಮರು ಇಲ್ಲಿ ವ್ಯಾಪಾರ ಮಾಡಬಾರದೆಂದು ಬೆದರಿಸಿದರು

ಇದು ಹಿಂದೂಗಳ ಏರಿಯಾ. ಇಲ್ಲಿ ಹಿಂದೂಗಳು ಮಾತ್ರ ವ್ಯಾಪಾರ ಮಾಡಬೇಕು. ಮುಸ್ಲಿಮರು ಇಲ್ಲಿ ವ್ಯಾಪಾರ ಮಾಡಲೇಬಾರದೆಂದು ಬೆದರಿಸಿ ಹಲ್ಲೆಗೈದರು ಎಂದು ಸಕಲೇಶಪುರ ಸಮೀಪದ ಮಾರನ ಹಳ್ಳಿ ಎಂಬಲ್ಲಿ ಶುಕ್ರವಾರ ಸಂಜೆ ಸಂಘ ಪರಿವಾರದ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಮಂಗಳೂರು  ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಝ್ವಾನ್ ಹೇಳಿದ್ದಾರೆ.

ಹಿಲ್‌ಟಾಪ್ ಎಂಬ ಹೆಸರಿನ ಈ ಹೊಟೇಲನ್ನು ನನ್ನಣ್ಣ ಜಬ್ಬಾರ್ ಪಾಲುದಾರಿಕೆಯಲ್ಲಿ ಒಂದುವರೆ ತಿಂಗಳ ಹಿಂದೆ ಆರಂಭಿಸಿದ್ದರು. ನಮ್ಮಲ್ಲಿ ಮೀನು ಮತ್ತು ಕೋಳಿ ಮಾಂಸ ಹೊರತುಪಡಿಸಿದರೆ ಬೀಫ್, ಮಟನ್ ಮಾಂಸದ ಪದಾರ್ಥ ಮಾಡುವುದಿಲ್ಲ. ಆದರೂ ಶುಕ್ರವಾರ ಸಂಜೆ ಹಲವು ಮಂದಿ ನಮ್ಮ ಹೊಟೇಲಿಗೆ ನುಗ್ಗಿ ನೀವು ಇಲ್ಲಿ ಬೀಫ್ ಮಾಂಸದ ಪದಾರ್ಥ ಮಾಡುತ್ತೀರಿ ಎಂದು ಗದ್ದಲ ಎಬ್ಬಿಸಿದರು. ಅಲ್ಲದೆ ನಮಗೆ ಕೈ, ರಾಡ್, ತ್ರಿಶೂಲದಿಂದ ಹೊಡೆಯತೊಡಗಿದರು. ನಾವಿಲ್ಲಿ ಬೀಫ್ ಮಾಂಸದ ಪದಾರ್ಥ ಮಾಡುವುದಿಲ್ಲ. ಬೇಕಿದ್ದರೆ ನೋಡಿ ಎಂದರೂ ಸಂಘಪರಿವಾರದ ಕಾರ್ಯಕರ್ತರು ಕೇಳಲಿಲ್ಲ. ಹೊಡೆಯುತ್ತಲೇ ಮುಸ್ಲಿಮರು ಇಲ್ಲಿ ವ್ಯಾಪಾರ ಮಾಡಬಾರದು ಎಂದು ಬೆದರಿಕೆ ಹಾಕಿದರು ಎಂದು ರಿಝ್ವಾನ್ ತಿಳಿಸಿದ್ದಾರೆ.

ಹಲ್ಲೆಯಿಂದ ನನಗೆ ಮತ್ತು ಉತ್ತರ ಭಾರತ ಮೂಲದ ಅಮಿತ್‌ಗೆ ಹಾಗೂ ಪಾಲುದಾರ ಅಬ್ಬುಲ್ಲಾ ಅವರಿಗೂ ಗಾಯವಾಗಿದೆ. ಅಮಿತ್ ಮತ್ತು ನನಗೆ ತೀವ್ರ ಸ್ವರೂಪದ ಗಾಯವಾದ ಕಾರಣ ಮೊದಲು ಪುತ್ತೂರು ಆಸ್ಪತ್ರೆಗೆ ದಾಖಲಾದೆವು. ಅಲ್ಲಿಂದ ವೆನ್ಲಾಕ್‌ಗೆ ಹೋದೆವು. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ರಿಝ್ವಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News