ಶಿವಮೊಗ್ಗ: ಪೆಂಡಾಲ್ ಹಾಕಿಸಿ ಬಿರಿಯಾನಿ ಭೋಜನ ಏರ್ಪಡಿಸಿ ಶ್ವಾನದ ಹುಟ್ಟುಹಬ್ಬ ಆಚರಿಸಿದ ಯುವಕ

Update: 2022-01-15 16:35 GMT
                 ಶ್ವಾನದ ಹುಟ್ಟುಹಬ್ಬ ಆಚರಿಸಿದ ಮುಹಮ್ಮದ್ ಅಯಾಝ್

ಶಿವಮೊಗ್ಗ, ಜ.15:  ಶ್ವಾನ ಪ್ರಿಯರೊಬ್ಬರು ಶಿವಮೊಗ್ಗದಲ್ಲಿ ತಾವು ಸಾಕಿರುವ ಶ್ವಾನದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಸುದ್ದಿಯಾಗಿದ್ದಾರೆ.

ಪೆಂಡಾಲ್ ಹಾಕಿಸಿ, ಕೇಕ್ ಕಟ್ ಮಾಡಿಸಿ, ಸ್ನೇಹಿತರಿಗೆಲ್ಲ ಬಿರಿಯಾನಿ ಊಟ ಹಾಕಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಅಚ್ಚುಮೆಚ್ಚಿನ ಶ್ವಾನಕ್ಕೆ ಅತ್ಯಂತ ದುಬಾರಿ ಗಿಫ್ಟ್ ಕೂಡ ನೀಡಿದ್ದಾರೆ.

ರಾಗಿಗುಡ್ಡದ ಮುಹಮ್ಮದ್ ಅಯಾಝ್  ಸೈಬೀರಿಯನ್ ಹಸ್ಕಿ ತಳಿಯ ಶ್ವಾನವೊಂದನ್ನು ಸಾಕಿದ್ದಾರೆ. ಅದಕ್ಕೆ ಟೈಸನ್ ಎಂದು ಹೆಸರಿಟ್ಟಿದ್ದಾರೆ. ಜನವರಿ 13ರಂದು ಟೈಸನ್ ಗೆ ಮೊದಲ ವರ್ಷದ ಹುಟ್ಟುಹಬ್ಬ. ಅದನ್ನು  ಅದ್ದೂರಿಯಾಗಿ ಆಚರಿಸಿದ್ದಾರೆ.

ಟೈಸನ್ ಗೆ ದುಬಾರಿ ಗಿಫ್ಟ್: ಅಯಾಝ್ ತಮ್ಮ ಅಚ್ಚುಮೆಚ್ಚಿನ ಶ್ವಾನಕ್ಕೆ ದುಬಾರಿ ಗಿಫ್ಟ್ ನೀಡಿದ್ದಾರೆ. ಅತ್ಯಂತ ಮೆತ್ತನೆಯ ಹಾಸಿಗೆಯೊಂದನ್ನು ತರಿಸಿಕೊಂಡಿದ್ದಾರೆ. ಅದರ ಬೆಲೆ ಸುಮಾರು 13 ಸಾವಿರ ರೂ. ಅಂತೆ. ‘ಟೈಸನ್ ಆರಾಮಾಗಿ ಕೂರಬೇಕು. ಹಾಗಾಗಿ ತುಂಬಾ ಮೆತ್ತನೆಯ ಹಾಸಿಗೆ ತರಿಸಿ, ಗಿಫ್ಟ್ ಮಾಡಿದ್ದೇನೆ ಎಂದು ಮೊಹಮ್ಮದ್ ಅಯಾಜ್  ತಿಳಿಸಿದರು.

ಶ್ವಾನಕ್ಕಾಗಿ ಪ್ರತ್ಯೇಕ ಮನೆಯಲ್ಲಿ ವಾಸ: 

ಟೈಸನ್ ಗಾಗಿ ಮೊಹಮ್ಮದ್ ಅಯಾಝ್ಅವರು ಮನೆಯವರಿಂದ ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪದ ಅಮೀರ್ ಅಹಮದ್ ಕಾಲೋನಿಯಲ್ಲಿ ಮೊಹಮ್ಮದ್ ಅಯಾಝ್ಅವರ ಕುಟುಂಬದವರು ವಾಸವಾಗಿದ್ದಾರೆ. ಅಪ್ಪ, ಅಮ್ಮ, ಅಣ್ಣ, ಅಕ್ಕಂದಿರಿದ್ದಾರೆ.

‘ನಮ್ಮ ಮನೆಯಲ್ಲಿ ನಾಯಿ ಸಾಕಲು ವಿರೋಧವಿದೆ. ಹಾಗಾಗಿ ರಾಗಿಗುಡ್ಡದಲ್ಲಿ ಮನೆ ಮಾಡಿದ್ದೇನೆ. ಅಲ್ಲಿಯೇ ಟೈಸನ್ ಜೊತೆಗೆ ಇರುತ್ತೇನೆ. ನಿತ್ಯ ಮನೆಗೆ ಹೋಗಿ ಎಲ್ಲರನ್ನ ಮಾತನಾಡಿಸಿಕೊಂಡು ಬರುತ್ತೇನೆ. ಅದರೆ ಇಲ್ಲಿ ಬಂದು ಉಳಿದುಕೊಳ್ಳುತ್ತೇನೆ’ ಎಂದು ಹೇಳುತ್ತಾರೆ ಮುಹಮ್ಮದ್ ಅಯಾಝ್

‘ನಾಯಿ ಸಾಕುವುದು ಬರಿ ಪ್ರತಿಷ್ಠೆಯಾಗಬಾರದು. ಅದಕ್ಕೆ ಒಳ್ಳೆಯ ಆಹಾರ, ಔಷಧೋಪಚಾರ ಮಾಡಬೇಕು. ಪ್ರಾಣಿಗಳ ಬಗ್ಗೆ ಪ್ರೀತಿ ಇರಬೇಕು ಎಂದು ಶ್ವಾನ ಪ್ರಿಯರಿಗೆ ಮುಹಮ್ಮದ್ ಅಯಾಝ್ ಕಿಕಿವಿಮಾತು ಹೇಳಿದ್ದಾರೆ.

ಮುಹಮ್ಮದ್ ಅಯಾಝ್ ಅವರು ಶ್ವಾನದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿರುವುದು ಅವರ ಸ್ನೇಹಿತರ ವಲಯ, ಅಕ್ಕಪಕ್ಕದ ನಿವಾಸಿಗಳು, ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News