ಮೈಸೂರು: ಮೇಲ್ವರ್ಗದವರ ಬೀದಿಗೆ ಪಾನಿಪುರಿ ತಿನ್ನಲು ಬಂದಿದ್ದಕ್ಕೆ ದಲಿತರ ಮನೆಗೆ ನುಗ್ಗಿ ಹಲ್ಲೆ

Update: 2022-01-16 06:18 GMT
ಹಲ್ಲೆಗೊಳಗಾದ ಪ್ರಸನ್ನ

ಮೈಸೂರು, ಜ.16: ಮೇಲ್ವರ್ಗದವರ ಬೀದಿಗೆ ದಲಿತ ಯುವಕ ಪಾನಿಪುರಿ ತಿನ್ನಲು ಹೋದನೆಂಬ ಕಾರಣಕ್ಕೆ ತಂಡವೊಂದು ದಲಿತರ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ಮೈಸೂರು ತಾಲೂಕು ಜಯಪುರ ಹೋಬಳಿಯಲ್ಲಿ ನಡೆದಿರುವುದು ವರದಿಯಾಗಿದೆ.

ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದಲಿತ ದೌರ್ಜನ್ಯ ಪ್ರಕರಣದಡಿಯಲ್ಲಿ ಆರು ಮಂದಿ ಆರೋಪಿಗಳನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ಅರಸಿನಕೆರೆ ಗ್ರಾಮದ ನಿವಾಸಿಗಳಾದ ಮೂರ್ತಿ, ಸಚಿನ್, ನವೀನ್, ಚಂದನ್, ಮಹದೇವಸ್ವಾಮಿ ಮತ್ತು ಸಂತೋಷ್ ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆ ವಿವರ: ದಲಿತ ಯುವಕ ಪ್ರಸನ್ನ ಎಂಬವರು ಜ.13ರಂದು ಸವರ್ಣಿಯರ ಬೀದಿಗೆ ಹೋಗಿ ಪಾನಿಪುರಿ ತಿಂದಿದ್ದಾನೆನ್ನಲಾಗಿದೆ. ಈ ವೇಳೆ ತಿಂದ ಪ್ಲೇಟ್ ಅನ್ನು ಡಸ್ಟ್ ಬಿನ್ ಗೆ ಹಾಕಲಿಲ್ಲ ಎಂಬುದನ್ನೇ ನೆಪ ಮಾಡಿಕೊಂಡು ಸವರ್ಣೀಯ ವ್ಯಕ್ತಿಯೋರ್ವ ಪ್ರಶ್ನಿಸಿದ್ದು, ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.

ಇದಾದ ನಂತರ ಶುಕ್ರವಾರ ಸವರ್ಣೀಯರ ತಂಡವೊಂದು ದಲಿತರ ಬೀದಿಯಲ್ಲಿರುವ ಪ್ರಸನ್ನರ ಮನೆಗೆ ನುಗ್ಗಿ ಪ್ರಸನ್ನ ಸಹಿತ ನಾಲ್ವರ ಮೇಲೆ ಹಲ್ಲೆ ನಡೆಸಿದೆ. ಹಲ್ಲೆಕೋರರು ಮಾರಕಾಸ್ತ್ರಗಳನ್ನು ಹೊಂದಿದ್ದರು ಎಂದು ಆರೋಪಿಸಲಾಗಿದೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News