ಬೆಳಗಾವಿಯಲ್ಲಿ ಮೂರು ಪುಟ್ಟ ಕಂದಮ್ಮಗಳ ನಿಗೂಢ ಮೃತ್ಯು

Update: 2022-01-16 13:03 GMT

ಬೆಳಗಾವಿ, ಜ. 16: ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ `ರುಬೆಲ್ಲಾ' ಲಸಿಕೆ(ಚುಚ್ಚುಮದ್ದು) ಪಡೆದಿದ್ದ ಮೂವರು ಮಕ್ಕಳು ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದು, ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ರಾಮದುರ್ಗ ತಾಲೂಕಿನ ಪವಿತ್ರಾ ಹುಲಗೂರ(13 ತಿಂಗಳು), ಮಧು ಕರಗುಂದಿ(14 ತಿಂಗಳು) ಮತ್ತು ಚೇತನ ಪೂಜಾರಿ(15 ತಿಂಗಳು) ಎನ್ನುವ ಮಕ್ಕಳು ಸಾವನ್ನಪ್ಪಿವೆ. ಇನ್ನೊಂದು ಮಗುವಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕ ದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಒಂದು ಮಗು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮೃತಪಟ್ಟಿತ್ತು. ಇನ್ನೆರಡು ಮಕ್ಕಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಸಿಕೆಯಿಂದ ಅಡ್ಡಪರಿಣಾಮ ಆಗಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತವಾಗಿದೆ.

ಕೊರೋನ ಸೇರಿ ವಿವಿಧ ಲಸಿಕಾ ಅಭಿಯಾನ ನಡೆಯುತ್ತಿರುವ ಈ ಸಂದರ್ಭದಲ್ಲಿ ನಡೆದಿರುವ ಘಟನೆಯು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. 25 ಮಕ್ಕಳಿಗೆ ಜ.12ರಂದು ವಿವಿಧ ಲಸಿಕೆಗಳನ್ನು ನೀಡಲಾಗಿತ್ತು. ಇವರಲ್ಲಿ 6 ಮಂದಿಗೆ `ರುಬೆಲ್ಲಾ' ಲಸಿಕೆ ಕೊಡಲಾಗಿತ್ತು. ಇವರಲ್ಲಿ ಐವರಲ್ಲಿ ವಾಂತಿ- ಭೇದಿ ಕಾಣಿಸಿಕೊಂಡಿತ್ತು. ಒಂದು ಮಗು ಗುಣಮುಖವಾಗಿದೆ. ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ಮಾಹಿತಿ ದೊರೆತಿದೆ.

ಮಕ್ಕಳಿಗೆ ವಿವಿಧ ಲಸಿಕೆಯನ್ನು ಒಂದೇ ಕಡೆ ನೀಡಿದ್ದಾರೆ. 15ರಿಂದ 18ವರ್ಷದ ವರಿಗೆ ಕೋವಿಡ್ ಲಸಿಕೆಯನ್ನೂ ಆಗಲೇ ಕೊಡಲಾಗಿದೆ. ಆಗ ಬಹಳ ಜನರು ಸೇರಿದ್ದರು. ಸಿಬ್ಬಂದಿಗೆ ಗೊಂದಲ ಉಂಟಾಗಿರುವ ಸಾಧ್ಯತೆಯೂ ಇದೆ. ಅವರು ಜಾಗೃತಿ ವಹಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಭೀಮಶಿ ವಾರಿಮನಿ ತಿಳಿಸಿದ್ದಾರೆ.

ಚಿಕಿತ್ಸೆಗೆ ಸ್ಪಂದಿಸಲಿಲ್ಲ: ಆಸ್ಪತ್ರೆಗೆ ಬಂದಾಗಲೇ ಇಬ್ಬರು ಮಕ್ಕಳು ತೀವ್ರ ಅಸ್ವಸ್ಥರಾಗಿದ್ದರು. ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಮಕ್ಕಳ ವಿಭಾಗದ ವೈದ್ಯರು ಮಾಹಿತಿ ನೀಡಿದ್ದಾರೆ. ಮತ್ತೊಂದು ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಆ ಮಗು ಚೇತರಿಸಿಕೊಳ್ಳಲಿದೆ. ಆ ಮಕ್ಕಳಿಗೆ ನೀಡಿರುವ ಚುಚ್ಚುಮದ್ದಿನ ಬಗ್ಗೆ ತನಿಖೆ ನಡೆಸಬೇಕಾಗುತ್ತದೆ. ನಮ್ಮಲ್ಲಿ ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಬಿಮ್ಸ್ ನಿರ್ದೇಶಕ ಡಾ.ಆರ್.ಜಿ.ವಿವೇಕಿ ಪ್ರತಿಕ್ರಿಯೆ ನೀಡಿದ್ದಾರೆ. 

`ಬೆಳಗಾವಿಯ ರಾಮದುರ್ಗ ತಾಲೂಕಿನಲ್ಲಿ `ರುಬೆಲ್ಲಾ' ಲಸಿಕೆ ಪಡೆದ ಬಳಿಕ ಮಕ್ಕಳ ಸಾವು ಆರೋಪ ಕೇಳಿ ಬಂದಿದೆ. ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಏನಾಗಿದೆ ಎಂದು ನೋಡಿಕೊಂಡು ಮಾತಾಡ್ತೇನೆ'

-ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

ಸಾವಿನ ಕುರಿತು ತನಿಖೆಗೆ ಆದೇಶ: `ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ `ರುಬೆಲ್ಲಾ' ಲಸಿಕೆ(ಚುಚ್ಚುಮದ್ದು) ಪಡೆದು ಮೂವರು ಕಂದಮ್ಮಗಳು ಮೃತಪಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಾವಿನ ಬಗ್ಗೆ ಈಗಾಗಲೆ ತನಿಖೆಗೆ ಆದೇಶಿಸಲಾಗಿದೆ. ಮೃತ ಮಕ್ಕಳ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದೇವೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಪರಿಶೀಲಿಸಿ ಕ್ರಮವಹಿಸುತ್ತೇವೆ. ಇದರಲ್ಲಿ ಯಾರೇ ಸಿಬ್ಬಂದಿ ತಪ್ಪು ಮಾಡಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ'

-ಡಾ.ಎಸ್.ವಿ.ಮುನ್ಯಾಳ್, ಜಿಲ್ಲಾ ಆರೋಗ್ಯಾಧಿಕಾರಿ ಬೆಳಗಾವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News