ರಾಜ್ಯದಲ್ಲಿ ಸಂಸ್ಕೃತ ವಿವಿ ಸ್ಥಾಪನೆ: ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ

Update: 2022-01-16 10:33 GMT
Photo: Twitter

ಮಂಗಳೂರು, ಜ.16: ರಾಜ್ಯ ಸರಕಾರವು ಮಾಗಡಿ ಸಮೀಪ ನೂರಾರು ಎಕರೆ ಜಾಗದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನಗೆ ಮುಂದಾಗಿರುವುದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಸಂಸ್ಕೃತ ವಿವಿ ಸ್ಥಾಪನೆಯನ್ನು ವಿರೋಧಿಸುವವರು, ಸರಕಾರವು ಕನ್ನಡ ಭಾಷೆಯನ್ನು ಬದಿಗೊತ್ತಿ, ಸಂಸ್ಕೃತಕ್ಕೆ ಮಣೆ ಹಾಕುತ್ತಿದೆ ಎಂದು ಆರೋಪಿಸಿದರೆ, ಭಾರತೀಯ ಭಾಷೆಗಳ ಮೇಲೆ ದ್ವೇಷವನ್ನು ಹರಡುವುದು ಸರಿಯಲ್ಲ ಎಂಬುದು ಸಂಸ್ಕೃತ ವಿವಿ ಪರವಾಗಿರುವವರ ವಾದವಾಗಿದೆ. ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಂಸ್ಕೃತ ವಿವಿ ಪರ-ವಿರೋಧ ಚರ್ಚೆ ಜೋರಾಗಿಯೇ ಸಾಗಿದೆ. ಟ್ವಿಟರ್ ನಲ್ಲಿ 'ಸಂಸ್ಕೃತ ವಿವಿ ಬೇಡ', 'Say NO To Sanskrit' ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ.

ಸರಕಾರವು ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಬದಿಗೊತ್ತಿ ಸಂಸ್ಕತ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ, ಇದರ ವಿರುದ್ಧ ಇಂದು(ಜ.16) ಪೂರ್ವಾಹ್ನ 11 ಗಂಟೆಯಿಂದ ಟ್ವಿಟರ್ ಅಭಿಯಾನವನ್ನೇ ಆರಂಭಿಸಿದೆ.

ಕನ್ನಡಿಗರ ತೆರಿಗೆ ಹಣದಲ್ಲಿ ರಾಜ್ಯ ಸರಕಾರವು ಸಂಸ್ಕೃತ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತಿದೆ. ಇದಕ್ಕಾಗಿ ಮಾಗಡಿ ಬಳಿ ನೂರಾರು ಎಕರೆ ಜಾಗವನ್ನು ನೀಡಲಾಗಿದ್ದು, 359 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಇದಲ್ಲದೆ, ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುವ ಯೋಚನೆಯಲ್ಲಿದೆ. ಕನ್ನಡ ಭಾಷೆಯನ್ನು ಬದಿಗೊತ್ತಿ, ಸಂಸ್ಕೃತಕ್ಕೆ ಮಣೆ ಹಾಕುತ್ತಿರುವ ಸರಕಾರದ ವಿರುದ್ಧ ಆರಂಭವಾಗಿರುವ ಟ್ವಿಟರ್ ಅಭಿಯಾನವು ಸಾಂಕೇತಿಕ ಹೋರಾಟವಾಗಿದೆ. ಸರಕಾರವು ಸಂಸ್ಕೃತ ವಿವಿ ಸ್ಥಾಪನೆಯ ಯೋಚನೆ ಬಿಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಟ್ವಿಟರ್ ನಲ್ಲಿ 'Say NO To Sanskrit' ಹ್ಯಾಶ್ ಟ್ಯಾಗ್ ಗೆ ಪರ-ವಿರೋಧ ಕೆಲವು ಟ್ವೀಟ್ ಗಳು ಇಲ್ಲಿವೆ

"ಕನ್ನಡ ಈ ಮಣ್ಣಿನ ಆತ್ಮ. ಬಸವಣ್ಣನವರ ನಾಡಿನಲ್ಲಿ ಅನ್ಯ ಭಾಷೆಗಳನ್ನು ಸಹಿಸುವುದಿಲ್ಲ. ನಮ್ಮ ಪೂರ್ವಜರು ಈ ನೆಲದ ಜನಾಂಗವನ್ನು ಕನ್ನಡದಿಂದ ಪೋಷಿಸಿದ್ದಾರೆ. ಹಿಂದಿ/ಸಂಸ್ಕೃತ ಹೇರಿಕೆಯನ್ನು ವಿರೋಧಿಸಲು ಎಲ್ಲ ಕನ್ನಡಿಗರು ಮುಂದಾಗಬೇಕು."

"ಸಂಸ್ಕೃತವು ಎಲ್ಲಾ ಭಾಷೆಯ ತಾಯಿ ಎಂಬುದು ನಾವು ಕೇಳಿದ ದೊಡ್ಡ ಸುಳ್ಳು, ಕನ್ನಡವು ಸಂಸ್ಕೃತದಿಂದ ಉದ್ಭವಿಸಿದೆ ಎನ್ನುವವರು ಭಾಷೆಗಳ ವಂಶವೃಕ್ಷವನ್ನು ಗಮನಿಸಿ. ಸುಳ್ಳು ಹೇಳುವ ಮೂಲಕ ದೇವರ ಹೆಸರಿನಲ್ಲಿ ಸಂಸ್ಕೃತವನ್ನು ಎಲ್ಲಾ ಭಾಷೆಗಳ ಮೇಲೆ ಹೇರಲಾಗುತ್ತಿದೆ"

"ನಿನ್ನೆ ಹಿಂದಿ ಬೇಡ ಅಂದರು. ಈಗ ಸಂಸ್ಕೃತ ಬೇಡ ಅನ್ನುತ್ತಿದ್ದಾರೆ. ಮುಂದೆ ಏನು? ನಮ್ಮ ಭಾರತೀಯ ಭಾಷೆಗಳ ಮೇಲೆ ಸದಾ ದ್ವೇಷವನ್ನು ಹರಡುವುದು!!"
ನೀವು ಎಂದಾದರೂ ಇಲ್ಲಿ 'ಇಂಗ್ಲಿಷ್ ಬೇಡ ಎಂದು ಹೇಳಿದ್ದೀರಾ? ಬ್ರಿಟಿಷರು ಭಾರತವನ್ನು ತೊರೆದರು ಆದರೆ ಈ ಗುಲಾಮರು ತಮ್ಮ ಗುಲಾಮಗಿರಿಯನ್ನು ಬಿಡುವುದಿಲ್ಲ ಎಂಬುದು ಸಂಸ್ಕೃತ ವಿವಿ ಪರ ಇರುವವರ ಅಭಿಪ್ರಾಯವಾಗಿದೆ."

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News