ನಾರಾಯಣ ಗುರುಗಳು ಹಿಂದೂ ಧರ್ಮಕ್ಕೆ ಸೇರಿದವರಲ್ಲವೇ?: ಕೇಂದ್ರ ಸರಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Update: 2022-01-16 11:50 GMT

ಬೆಂಗಳೂರು: `ನಾರಾಯಣ ಗುರುಗಳಿಗೆ ಮಾಡಿರುವ ಅವಮಾನಕ್ಕಾಗಿ ಕೇಂದ್ರದ ಬಿಜೆಪಿ ಸರಕಾರ ದೇಶದ ಕ್ಷಮೆ ಕೇಳಬೇಕು. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಪ್ರಾಧಾನ್ಯ ಕೊಟ್ಟು ಅವಕಾಶ ನೀಡಬೇಕು' ಎಂದು ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ನಾನು ಮುಖ್ಯಮಂತ್ರಿಯಾಗಿದ್ದಾಗ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯ ಸರಕಾರವೇ ಅಧಿಕೃತವಾಗಿ ಆಚರಿಸಬೇಕೆಂಬ ನಿರ್ಧಾರ ಕೈಗೊಂಡೆ. ಇದರಿಂದಾಗಿ ಇಂದು ರಾಜ್ಯದ ಮೂಲೆಮೂಲೆಗೆ ಗುರುಗಳ ಚಿಂತನೆಯ ಸಂದೇಶ ತಲುಪುತ್ತಿದೆ ಎಂಬ ಹೆಮ್ಮೆ ಮತ್ತು ತೃಪ್ತಿ ನನ್ನದು' ಎಂದು ತಿಳಿಸಿದ್ದಾರೆ.

`ತಮ್ಮ ಮೂಗಿನಡಿಯಲ್ಲಿಯೇ ನಾರಾಯಣ ಗುರುಗಳಿಗೆ ಮಾಡಿರುವ ಅವಮಾನದ ಬಗ್ಗೆ ಪ್ರಧಾನಿ ಮೋದಿ ಇನ್ನೂ ಪ್ರತಿಕ್ರಿಯಿಸದೆ ಇರುವುದು ಆಶ್ಚರ್ಯಕರ. ಇದನ್ನು ಹೇಗೆ ಅರ್ಥೈಸಬೇಕು? ಈ ಅವಮಾನಕ್ಕೆ ಸಹಮತ ಇದೆಯೆಂದೇ?. ಹಿಂದೂ ಧರ್ಮದ ಸುಧಾರಕ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ನಿರಾಕರಿಸಿ ಅವಮಾನಿಸಿರುವುದು `ಹಿಂದೂ ಹೃದಯ ಸಾಮ್ರಾಟ' ಎಂದು ಕರೆಸಿಕೊಳ್ಳುತ್ತಿರುವ ಪ್ರಧಾನಿ ಮೋದಿ ಅವರ ಗಮನಕ್ಕೆ ಇನ್ನೂ ಬಂದಿಲ್ಲವೇ?' ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

`ಶತಮಾನದ ಹಿಂದೆಯೇ ಅಸ್ಪೃಶ್ಯತೆ ಮತ್ತು ಪುರೋಹಿತಷಾಹಿ ವ್ಯವಸ್ಥೆ ವಿರುದ್ದ ಸಿಡಿದೆದ್ದು ಹಿಂದೂಧರ್ಮದ ಸುಧಾರಣೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ನಾರಾಯಣ ಗುರುಗಳಿಗೆ ಅವಮಾನಿಸಿರುವ ಬಿಜೆಪಿ ಮತ್ತು ಕೇಂದ್ರ ಸರಕಾರಕ್ಕೆ ಹಿಂದೂಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ?. ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಯಾವ ಕಾರಣಕ್ಕಾಗಿ ಅವಕಾಶ ನಿರಾಕರಿಸಲಾಗಿದೆ? ನಾರಾಯಣ ಗುರುಗಳು ಹಿಂದೂ ಧರ್ಮಕ್ಕೆ ಸೇರಿದವರಲ್ಲವೇ? ಅಂತಹ ಅಭಿಪ್ರಾಯವನ್ನು ಬಿಜೆಪಿ ಹೊಂದಿದ್ದರೆ ಹಾಗೆಂದು ಮುಕ್ತವಾಗಿ ಹೇಳುವ ಧೈರ್ಯ ತೋರಲಿ' ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

`ಗಣರಾಜ್ಯೋತ್ಸವ ಪರೇಡ್‍ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ತಳಸಮುದಾಯದ ಮಹಾಪುರುಷರ ಬಗ್ಗೆ ಬಿಜೆಪಿ ಮತ್ತು ಕೇಂದ್ರ ಸರಕಾರಕ್ಕೆ ಇರುವ ಪೂರ್ವಗ್ರಹ ಮತ್ತು ತಿರಸ್ಕಾರಕ್ಕೆ ಸಾಕ್ಷಿ'

-ಸಿದ್ಧರಾಮಯ್ಯ ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News