ಅತ್ಯಾಚಾರ ಪ್ರಕರಣದ ಸಂತ್ರಸ್ತೆ ವಯಸ್ಸು ಸಾಬೀತಾದರಷ್ಟೇ ಶಿಕ್ಷೆ: ಪೋಕ್ಸೊ ಪ್ರಕರಣದ ಕುರಿತು ಹೈಕೋರ್ಟ್ ಆದೇಶ

Update: 2022-01-16 13:35 GMT

ಬೆಂಗಳೂರು, ಜ. 16: ಅತ್ಯಾಚಾರ ಸಂತ್ರಸ್ತೆ ಅಪ್ರಾಪ್ತಳೆಂಬ ಸಂಗತಿಯನ್ನು ಆರೋಪಿ ಅಲ್ಲಗಳೆದಾಗ ಸಂತ್ರಸ್ತೆಯ ವಯಸ್ಸನ್ನು ರುಜುವಾತುಪಡಿಸುವ ಜವಾಬ್ದಾರಿ ಪ್ರಾಸಿಕ್ಯೂಷನ್ ಮೇಲಿರುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆ ವಯಸ್ಸು ಗೋತ್ತಾಗದ ಹೊರತಾಗಿಯೂ ಆರೋಪಿಗೆ ಶಿಕ್ಷೆ ವಿಧಿಸಿ ವಿಚಾರಣಾ ಕೋರ್ಟ್ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ. 

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಐದು ವರ್ಷ ಕಾರಾಗೃಹ ಶಿಕ್ಷೆ ಹಾಗೂ ಎರಡು ಸಾವಿರ ರೂ.ದಂಡ ವಿಧಿಸಿ ಜಮಖಂಡಿಯ ತ್ವರಿತಗತಿ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಯುವಕನೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ಈ ಮೇಲ್ಕಂಡ ಆದೇಶ ನೀಡಿದೆ.    

ಅಪ್ರಾಪ್ತ ಸಂತ್ರಸ್ತರ ವಯಸ್ಸು ತಿಳಿಯಲು ಎಸೆಸೆಲ್ಸಿ ಅಥವಾ ತತ್ಸಮಾನ ತರಗತಿಯ ಪ್ರಮಾಣಪತ್ರ ಪರಿಗಣಿಸಬೇಕಾಗುತ್ತದೆ. ಆ ಪ್ರಮಾಣ ಪತ್ರಗಳು ಇದ್ದರೆ ಬೇರೆ ಯಾವುದೇ ಸಾಕ್ಷ್ಯಾಧಾರಗಳು ಬೇಕಾಗುವುದಿಲ್ಲ. ಒಂದು ವೇಳೆ ಅದು ಇಲ್ಲವಾದರೇ ಸಂತ್ರಸ್ತ ಬಾಲಕಿ ದಾಖಲಾದ ಮೊದಲ ಶಾಲೆಯಲ್ಲಿ ನಮೂದಿಸಲಾದ ಜನ್ಮದಿನಾಂಕವನ್ನು ಪರಿಗಣಿಸಬೇಕಾಗುತ್ತದೆ ಹಾಗೂ ಅದೇ ಅಂತಿಮವಾಗುತ್ತದೆ. ಒಂದೊಮ್ಮೆ ಅದೂ ಇಲ್ಲವಾದರೆ, ನಗರ ಪಾಲಿಕೆ, ಪೌರಾಡಳಿತ ಪ್ರಾಧಿಕಾರ ಅಥವಾ ಪಂಚಾಯತ್ ವತಿಯಿಂದ ವಿತರಿಸಲಾದ ಜನನ ಪ್ರಮಾಣಪತ್ರ ಪರಿಗಣಿಸಬಹುದಾಗಿದೆ. ಈ ಯಾವ ದಾಖಲೆಗಳೂ ಲಭ್ಯವಿಲ್ಲದಿದ್ದಾಗ ಮಾತ್ರ ವೈದ್ಯಕೀಯ ಸಲಹೆ ಮೇರೆಗೆ ವಯಸ್ಸು ನಿರ್ಧರಿಸಬಹುದಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. 

ಸಂತ್ರಸ್ತೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಹಾಗೂ ಆಕೆಯನ್ನು ಅಕ್ರಮ ದೈಹಿಕ ಸಂಪರ್ಕ ಬೆಳೆಸುವ ಹಿನ್ನೆಲೆಯಲ್ಲಿ ಬಲವಂತವಾಗಿ ಅಥವಾ ವ್ಯಾಮೋಹ ತೋರಿಸಿ ಕರೆದುಕೊಂಡು ಹೋಗಿರುವುದನ್ನು ಸಾಬೀತುಪಡಿಸಬೇಕು. ಆದರೆ, ಈ ಪ್ರಕರಣದಲ್ಲಿ ಸಂತ್ರಸ್ತೆ 8 ರಿಂದ 10ನೆ ತರಗತಿಗೆಂದು ಸೇರಿದ್ದ ಶಾಲಾ ದಾಖಲಾತಿ ಪ್ರಮಾಣಪತ್ರವನ್ನು ಒದಗಿಸಿದ್ದು, ಅದರಲ್ಲಿ ಆಕೆಯ ಜನ್ಮದಿನಾಂಕ 1995ರ ಜೂ.2 ಎಂದು ಹೇಳಲಾಗಿದೆಯಾದರೂ, ಯಾವ ಆಧಾರದಲ್ಲಿ ಆ ಜನ್ಮ ದಿನಾಂಕ ನಮೂದಿಸಲಾಗಿದೆ, 1ರಿಂದ 7ನೆ ತರಗತಿ ವರೆಗೆ ಯಾವ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾಳೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ ಎಂದು ಕೋರ್ಟ್ ಹೇಳಿದೆ.

ಆರೋಪಿಯು ಸಂತ್ರಸ್ತೆ ಅಪ್ರಾಪ್ತಳೆಂಬ ಸಂಗತಿಯನ್ನು ಅಲ್ಲಗಳೆಯುತ್ತಿರುವಾಗ ಅದನ್ನು ರುಜುವಾತುಪಡಿಸುವ ಹೊಣೆ ಪ್ರಾಸಿಕ್ಯೂಷನ್ ಮೇಲಿರುತ್ತದೆ. ಆದರೆ, ವಯಸ್ಸನ್ನು ರುಜುವಾತುಪಡಿಸುವ ಪ್ರಾಸಿಕ್ಯೂಷನ್ ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ. ಕೇವಲ ಸಂತ್ರಸ್ತೆಯ ಶಾಲೆಯ ಮುಖ್ಯ ಶಿಕ್ಷಕರ ಒದಗಿಸಿರುವ ದಾಖಲಾತಿ ಪ್ರಮಾಣಪತ್ರ ಹಾಗೂ ವೈದ್ಯರ ವರದಿಯನ್ನು ಪರಿಗಣಿಸಿ, ವಿಚಾರಣಾ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ ಎಂದು ಹೇಳಿರುವ ಹೈಕೋರ್ಟ್, ಆರೋಪಿಯ ಶಿಕ್ಷೆ ರದ್ದುಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News